ಬೆಂಗಳೂರು: ಕರ್ನಾಟಕದಲ್ಲಿ ಅತ್ಯಾಚಾರಿಗಳ ರಕ್ಷಣೆ, ಭ್ರಷ್ಟರ ರಕ್ಷಣೆ ನಡೆದಿದೆ. ಇದು “ಕಾಂಗ್ರೆಸ್- ಇಂಡಿ’ ಒಕ್ಕೂಟದ ಕಾರ್ಯತಂತ್ರ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಲಬುರಗಿಯಲ್ಲಿ ಮಲಿಕ್‌ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸೇರಿ ಹಲವಾರು ಪ್ರಕರಣಗಳು ನಡೆದಿವೆ. ಇವುಗಳ ಕುರಿತು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಯಾಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಕರ್ನಾಟಕದ್ದು ಡಬಲ್ ಟ್ರಬಲ್ ಸರಕಾರ. ಕರ್ನಾಟಕದಲ್ಲಿ ಕಟಾಕಟ್ ಲೂಟಿ, ಸುಳ್ಳಿನ ಸರಕಾರವಿದೆ. ಮೂಡ ನಿವೇಶನ ಹಗರಣದಡಿ 5 ಸಾವಿರ ಕೋಟಿಯ ಹಗರಣ ನಡೆದಿದೆ. ರಾಜ್ಯದಲ್ಲಿ ಮೊಟ್ಟೆ ಹಗರಣವೂ ನಡೆಯುತ್ತಿದೆ. ಆ ಹಣವನ್ನೂ ಹೈಕಮಾಂಡ್‌ಗೆ ಕಳಿಸುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದರು.
ಗ್ಯಾರಂಟಿ ಬಗ್ಗೆ ಮಾತನಾಡಿದ ಮಹಿಳೆಯರ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೇಗಾಡುವ ವೀಡಿಯೋ ವೈರಲ್ ಆಗಿದೆ. ಗ್ಯಾರಂಟಿ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಮಾತನಾಡಿದ್ದಾರೆ, ನಾವು ದಿವಾಳಿ ಆಗುತ್ತೇವೆ ಎಂದು ಹೇಳಿದ್ದಾರೆ. ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ ಎಂದು ಶೆಹಜಾದ್ ಪೂನಾವಾಲಾ ಟೀಕಿಸಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರವು ಜನರ ಮೇಲೆ ನ್ಯಾಯಸಮ್ಮತವಲ್ಲದ ಜಿಝಿಯಾ ತೆರಿಗೆ ಹಾಕಲು ಮುಂದಾಗಿದೆ. ಪೆಟ್ರೋಲ್ , ಡೀಸೆಲ್ , ವಿದ್ಯುತ್, ಬಸ್ ಪ್ರಯಾಣದರ, ನೀರಿನ ದರ, ಸಿನೆಮಾ ಟಿಕೆಟ್, ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಪರಿಶಿಷ್ಟ ಜಾತಿಯ ಜನರ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು 25 ಸಾವಿರ ಕೋಟಿ ರೂ.ವನ್ನೂ ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ. ಇಲ್ಲಿ ಆದಿವಾಸಿಗಳ ಹಣ ಲೂಟಿ ಆಗುತ್ತಿದೆ. ಇದು ಪಿಕ್ ಪಾಕೆಟ್ ಸರಕಾರ ಎಂದು ಅವರು ಆರೋಪಿಸಿದರು.