Advertisement
ಜಾತಿ ಗಣತಿ ವರದಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸದಸ್ಯರಲ್ಲಿ ಒಡಕು ಇರುವಂತೆಯೇ ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲೂ ಒಗ್ಗಟ್ಟಿಲ್ಲ. ಇದನ್ನೇ ಬಳಸಿಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ಹೆಣೆಯಲಾರಂಭಿಸಿದೆ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸಭೆ ಆಯೋಜನೆಯಾಗಿದ್ದು, ಸಂಸದ ಬಸವರಾಜ ಬೊಮ್ಮಾಯಿ, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಹಿತ ಹಲವರು ಭಾಗಿಯಾಗಲಿದ್ದಾರೆ. ಒಳ ಮೀಸಲಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮುಂದಿಟ್ಟುಕೊಂಡು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ಸಭೆ ಇದಾಗಿದೆ. ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅನುಸರಿಸಬೇಕಾದ ಕಾನೂನಾತ್ಮಕ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ.
Related Articles
ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಎಸ್‌ಸಿ ಮೀಸಲು ಪ್ರಮಾಣವನ್ನು ಶೇ. 15ರಿಂದ 17ಕ್ಕೆ ಹಾಗೂ ಎಸ್‌ಟಿ ಮೀಸಲು ಪ್ರಮಾಣವನ್ನು ಶೇ. 4ರಿಂದ 7ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆಗ ವಿಪಕ್ಷವಾಗಿದ್ದ ಕಾಂಗ್ರೆಸ್ ಇದನ್ನು ವಿರೋಧಿಸಿತ್ತು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಚುನಾವಣ ಪ್ರಣಾಳಿಕೆಯಲ್ಲೂ ಒಳ ಮೀಸಲಾತಿ ನೀಡುವುದಾಗಿ ಘೋಷಿಸಿತ್ತಲ್ಲದೆ ಚಿತ್ರದುರ್ಗ ಸಮಾವೇಶದಲ್ಲಿ ಈ ಬಗ್ಗೆ ಭರವಸೆ ನೀಡಿತ್ತು. ಹೀಗಾಗಿ ಪರಿಶಿಷ್ಟರಲ್ಲಿ ಒಳ ಮೀಸಲಾತಿ ಕೊಡುವುದು ಕಾಂಗ್ರೆಸ್ ಸರಕಾರಕ್ಕೆ ಅನಿವಾರ್ಯ. ಆದರೆ ಕಾಂಗ್ರೆಸ್‌ನಲ್ಲಿರುವ ದಲಿತ ಬಲಗೈ ಗುಂಪಿಗೆ ಸೇರಿದ ನಾಯಕರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಸರಕಾರ ಈಗ ಯಾವ ಕಡೆ ವಾಲಿದರೂ ಇಕ್ಕಟ್ಟಿಗೆ ಸಿಲುಕಲಿದೆ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದೆ.
Advertisement