ಬೆಂಗಳೂರು: ಲೈಂಗಿಕ ಕಿರುಕುಳ ಆರೋಪದಡಿ ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆ ಕುರಿತು ವಿವರಣೆ ಕೇಳಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಯು. ಅರಬಿ ಅವರಿಗೆ ಜಾರಿ ಮಾಡಲಾಗಿದ್ದ ಶೋಕಾಸ್ ನೋಟಿಸ್ ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ಈ ವಿಚಾರವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಧ್ಯಾಂತರ ತಡೆ ನೀಡಿ ಆದೇಶಿಸಿದೆ.
ಡಾ| ಅರಬಿ ಮಂಗಳೂರು ವಿ.ವಿ.ಯ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು. ಅವರ ವಿರುದ್ಧ ವಿದ್ಯಾರ್ಥಿನಿ ಯೊಬ್ಬರು ಲೈಂಗಿಕ ಕಿರಕುಳ ಆರೋಪದಡಿ ದೂರು ನೀಡಿದ್ದರು. ದೂರು ಕುರಿತು ಜಾರಿ ಮಾಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಅರಬಿ ಉತ್ತರಿಸಿದ್ದರು. ಅದರಿಂದ ಸಮಾಧಾನಗೊಳ್ಳದ ವಿ.ವಿ.ಯು ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯ್ದೆ ಅಡಿಯ ವಿಚಾರಣೆ ಗಾಗಿ ಆಂತರಿಕ ದೂರುಗಳ ಸಮಿತಿ ರಚಿಸಿತ್ತು. ಅರಬಿ ಅವರನ್ನು ಪ್ರಕರಣದಲ್ಲಿ ದೋಷಿಯಾಗಿ ತಿಳಿಸಿ ಸಮಿತಿ ವರದಿ ನೀಡಿತ್ತು.
ಅದನ್ನು ಒಪ್ಪಿದ್ದ ವಿ.ವಿ. ಸಿಂಡಿಕೇಟ್ ಅರಬಿ ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆ ಅಂಗೀಕರಿಸಿತ್ತು. ಸೇವೆಯಿಂದ ವಜಾ ಗೊಳಿಸುವ ಪ್ರಸ್ತಾವನೆಗೆ ವಿವರಣೆ ನೀಡಿ 2ನೇ ಶೋಕಾಸ್ ನೋಟಿಸ್ ನೀಡಿ, ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿತ್ತು. ಈ 2ನೇ ಶೋಕಾಸ್ ನೋಟಿಸನ್ನು ಡಾ| ಅರಬಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ನ್ಯಾಯಪೀಠ ಎರಡನೇ ಶೋಕಾಸ್ ನೋಟಿಸ್ ರದ್ದುಪಡಿಸಿತ್ತು. ಇದರ ವಿರುದ್ದ ವಿ.ವಿ. ಮೇಲ್ಮನವಿ ಸಲ್ಲಿಸಿತ್ತು. ವಿ.ವಿ. ಪರ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.