Advertisement

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

08:15 PM Nov 30, 2020 | sudhir |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿರುವುದಕ್ಕೆ ಹೆಚ್ಚುವರಿ ಪಡಿತರದ ಜೊತೆಗೆ ಪರಿಹಾರ ಭತ್ಯೆಯನ್ನೂ ನೀಡುವ ಕುರಿತು ವಿವರಣೆ ನೀಡಲು ಡಿ.8ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಖುದ್ದು ವಿಚಾರಣೆಗೆ ಹಾಜರಾಗುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಅವರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಕೊರೊನಾ ಸೋಂಕಿನಿಂದ ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗಳ ಕುರಿತು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ನಿರ್ದೇಶನ ನೀಡಿತು.

ಅಲ್ಲದೇ 2020ರ ಮಾ.24ರಿಂದ ನ.30ರವರೆಗೆ ಅಂಗನವಾಡಿ ಮಕ್ಕಳಿಗೆ ಪೂರೈಕೆ ಮಾಡಿರುವ ಆಹಾರ ಧಾನ್ಯಗಳ ವಿವರಗಳನ್ನು ನೀಡುವಂತೆಯೂ ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ನಿರ್ದೇಶನ ನೀಡಿ, ಸರ್ಕಾರ ಸಲ್ಲಿಸುವ ವಿವರಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಆದೇಶಗಳನ್ನು ನೀಡಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

ಇದನ್ನೂ ಓದಿ:ಬೇಕಿದ್ದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದ್ದರಿಂದ ಇಷ್ಟೆಲ್ಲ ಆಯಿತು :N.R‌.ಸಂತೋಷ್‌

ಇದಕ್ಕೂ ಮೊದಲು ವಿಚಾರಣೆ ವೇಳೆ, ಸರ್ಕಾರದ ಪರ ವಾದ ಮಂಡಿಸಿದ ವಕೀಲ ವಿಕ್ರಂ ಹುಯಿಲಗೋಳ, ಕೇಂದ್ರ ಸರ್ಕಾರದ ಆದೇಶದಂತೆ ಪಡಿತರ ಧಾನ್ಯಗಳ ಜೊತೆಗೆ ಅದನ್ನು ಬೇಯಿಸಲು ಆಗುವ ಖರ್ಚನ್ನೂ ಕೂಡ ಲೆಕ್ಕ ಹಾಕಿ ಹೆಚ್ಚುವರಿ ಪಡಿತರ ನೀಡಲಾಗುತ್ತಿದೆ. ಇದರಲ್ಲಿ ಯಾವುದೆ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

Advertisement

ಆದರೆ ನ್ಯಾಯಾಲಯ, ಕೇಂದ್ರ ಸರ್ಕಾರ ಜು.31ರಂದು ರಾಜ್ಯಗಳಿಗೆ ನೀಡಿರುವ ನಿರ್ದೇಶನವನ್ನು ರಾಜ್ಯ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ, ಅದರಂತೆ ಪಡಿತರದ ಜೊತೆಗೆ ಅದನ್ನು ಬೇಯಿಸಲು ಆಗುವ ಹಣವನ್ನೂ ಸಹ ಪರಿಹಾರದ ರೂಪದಲ್ಲಿ ನೀಡಬೇಕಾಗುತ್ತದೆ ಎಂದು ಹೇಳಿತು.

ಸರ್ಕಾರಿ ವಕೀಲರು, ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸ್ಥಗಿತಿಗೊಳಿಸಲಾಗಿದೆ. ಅದರ ಬದಲಿಗೆ ಮಕ್ಕಳಿಗೆ ಪಡಿತರ ನೀಡಲಾಗುತ್ತಿದೆ. ಆ ಪಡಿತರದ ಜೊತೆಗೆ ಅಡುಗೆ ಬೇಯಿಸುವ ವೆಚ್ಚ (ಕುಕಿಂಗ್‌ ಕಾಸ್ಟ್‌)ಗೆ ಬದಲಾಗಿ ತೊಗರಿಬೇಳೆ ನೀಡಲಾಗುತ್ತಿದೆ. ಮತ್ತೆ ಹೆಚ್ಚುವರಿ ಪರಿಹಾರವನ್ನು ನೀಡಲಾಗದು ಎಂದು ವಿವರಿಸಿದರು. ಅದನ್ನು ಒಪ್ಪದ ನ್ಯಾಯಪೀಠ, ರಾಜ್ಯ ಸರ್ಕಾರ ಕೇಂದ್ರದ ನಿರ್ದೇಶನವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ, ಬೇಯಿಸುವ ವೆಚ್ಚ ನೀಡಲೇಬೇಕು ಎಂದು ಹೇಳಿತು.

ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ಮಿಗ್‌-29 ವಿಮಾನದ ಭಗ್ನಾವಶೇಷ ಪತ್ತೆ

ಅರ್ಜಿದಾರರ ಪರ ವಕೀಲ ಕ್ಲಿಫ್ಟನ್‌ ರೊಜಾರಿಯೋ, ಮಧ್ಯಾಹ್ನದ ಬಿಸಿಯೂಟ ವಿತರಣೆ ಸಂಬಂಧಿಸಿದ ಸುಪ್ರೀಂಕೋರ್ಟ್‌ ಹಾಗೂ ಕೇಂದ್ರದ ಆದೇಶಗಳನ್ನು ರಾಜ್ಯ ಸರ್ಕಾರ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಮಕ್ಕಳಿಗೆ ತೀವ್ರ ತೊಂದರೆಯಾಗಿದೆ ಎಂದರು.

ಹಿರಿಯ ನ್ಯಾಯವಾದಿ ಜೊಯ್ನಾ ಕೊಠಾರಿ, ಮಕ್ಕಳಿಗೆ ಹಿಂದೆ ನೀಡುತ್ತಿದ್ದ ಹಾಲು ಹಾಗೂ ಮೊಟ್ಟೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ನೀಡಿರುವ ಪಡಿತರದ ಬಗ್ಗೆ ವಿವರ ನೀಡಿಲ್ಲ, ಜೊತೆಗೆ ಮಾತೃವಂದನಾ ಯೋಜನೆಯಲ್ಲಿ ಎಷ್ಟು ಗರ್ಭಿಣಿಯರಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಸಹ ನೀಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next