ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಗ್ರಾಹಕರು ಸಿಕ್ಕಿಬಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ಈ ವಿಚಾರವಾಗಿ ಬೆಂಗಳೂರು ನಿವಾಸಿ ಎಸ್. ಬಾಬು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ರೀತಿ ಹೇಳಿದೆ.
ಅದೇ ರೀತಿ ಅರ್ಜಿದಾರರ ವಿರುದ್ಧ ಮಾನವ ಕಳ್ಳಸಾಗಾಣೆ ತಡೆ ಕಾಯ್ದೆ-1956ರ ಸೆಕ್ಷನ್ 3,4,5,6 ಮತ್ತು ಸೆಕ್ಷನ್ 370 ಅಡಿಯಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನೂ ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿತು.
ಪೊಲೀಸರು ಶೋಧ ನಡೆಸಿದಾಗ ಅರ್ಜಿದಾರರು ವೇಶ್ಯಾವಾಟಿಕೆಯಲ್ಲಿ ಗ್ರಾಹಕರು ಎಂಬುದು ವಿವಾದವಾಗಿಲ್ಲ. ವೇಶ್ಯಾಗೃಹದಲ್ಲಿರುವ ಗ್ರಾಹಕನನ್ನು ಕ್ರಿಮಿನಲ್ ಮೊಕದ್ದಮೆಗಳಿಗೆ ಎಳೆಯಲಾಗುವುದಿಲ್ಲ ಎಂಬುದು ಈ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ಹೇಳಿರುವ ನ್ಯಾಯಪೀಠ, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದಾಗ ಅಲ್ಲಿ ಗ್ರಾಹಕರು ಸಿಕ್ಕಿಬಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಅನ್ನುವುದನ್ನು ಪುನರುತ್ಛರಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2021ರ ಸೆ.23ರಂದು ಖಚಿತ ಮಾಹಿತಿ ಆಧರಿಸಿ ಮಾನವ ಕಳ್ಳ ಸಾಗಾಣೆ ತಡೆ ಕಾಯ್ದೆ ಮತ್ತು ಐಪಿಸಿ ಕಲಂ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕಿಯೆ ಆರಂಭಿಸಿದರು. ಪೊಲೀಸರು ದಾಳಿ ನಡೆಸಿದಾಗ ಆ ಮನೆಯ ಆವರಣದಲ್ಲಿ ಅರ್ಜಿದಾರರೂ ಸಹ ಇದ್ದರು.
ಕಾಯ್ದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹವನ್ನು ಇಟ್ಟುಕೊಳ್ಳುವುದಕ್ಕೆ ಅಥವಾ ಆವರಣವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸುತ್ತದೆ. ಸೆಕ್ಷನ್ 4ರಂತೆ ವೇಶ್ಯಾವಾಟಿಕೆಯಿಂದ ಹಣ ಗಳಿಕೆ ಮಾಡಿ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ. ಸೆಕ್ಷನ್ 5ರ ಪ್ರಕಾರ ವೇಶ್ಯಾವಾಟಿಕೆಗಾಗಿ ವ್ಯಕ್ತಿ ಸಾಗಣೆ, ಪ್ರಚೋದಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಸೆಕ್ಷನ್ 6ರಂತೆ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳದಲ್ಲಿ ವ್ಯಕ್ತಿಯನ್ನು ಬಂಧಿಸುವುದಾಗಿದೆ. ಆದರೆ ಈ ಯಾವ ಚಟುವಟಿಕೆಗಳನ್ನು ಅರ್ಜಿದಾರರು ನಡೆಸಿದ್ದಾರೆಂಬುದನ್ನು ದೂರಿನಲ್ಲಿ ಆರೋಪಿಸಿಲ್ಲ. ಹಾಗಾಗಿ ಪ್ರಕರಣ ಕಾನೂನಿನಡಿ ನಿಲ್ಲುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.