Advertisement

ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ ಹೈಕೋರ್ಟ್‌

08:00 PM Mar 08, 2022 | Team Udayavani |

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ 19 ವರ್ಷದ ಬಿ.ಕಾಂ. ಪದವಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿ ಆದೇಶಿಸಿದೆ.

Advertisement

ಪರೀಕ್ಷೆ ಬರೆಯುವುದಕ್ಕಾಗಿ ಜಾಮೀನು ನೀಡುವಂತೆ ಕೋರಿ ಆರೋಪಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ನ್ಯಾಯಪೀಠ, ಇದೇ 15ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ಕೊಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿತು. ಅಪ್ರಾಪೆ¤ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದರ್ಶನ್‌ ಜೈಲು ಸೇರಿದ್ದಾನೆ.

ಆರೋಪಿ ವಿದ್ಯಾರ್ಥಿಗೆ ಮಾ.15ರಿಂದ ಮಾ.31ರವರಗೆ ಬಿ.ಕಾಂ. ಪದವಿಯ ಮೂರನೇ ಸೆಮಿಸ್ಟರ್‌ ಪರೀಕ್ಷೆ ನಿಗದಿಯಾಗಿದ್ದು, ಜಾಮೀನು ನೀಡುವಂತೆ ಆತನ ಪರ ವಕೀಲರು ಕೋರಿದ್ದಾರೆ. ಮತ್ತೂಂದೆಡೆ ಪ್ರಕರಣ ತನಿಖಾ ಹಂತದಲ್ಲಿದೆ. ಆರೋಪಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರಕರಣ ತನಿಖಾ ಹಂತದಲ್ಲಿರುವ ಮಾತ್ರಕ್ಕೆ ಆರೋಪಿಯ ಭವಿಷ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರೀಕ್ಷೆ ಬರೆಯಲು ಆರೋಪಿಗೆ ಸೂಕ್ತ ವ್ಯವಸ್ಥೆ ಮಾಡುವುದು ಅಗತ್ಯವಾಗಿದೆ ಹೈಕೋರ್ಟ್‌ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಷರತ್ತುಗಳನ್ನು ವಿಧಿಸಿ ಪರೀಕ್ಷೆ ಬರೆಯಲು ಆರೋಪಿಗೆ ಅವಕಾಶ ಕಲ್ಪಿಸಿ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್‌, ಈ ಆದೇಶವು ಆರೋಪಿ ಮುಂದೆ ಪ್ರಕರಣ ಸಂಬಂಧ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೈಕೋರ್ಟ್‌ ಇದೇ ವೇಳೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಎಡದಂಡೆ ಕಾಲುವೆ ಕುಸಿತ; ಅಧಿಕಾರಿಗಳ ಪರಿಶೀಲನೆ ತುರ್ತು ದುರಸ್ತಿಗೆ ಕ್ರಮ :ಶಾಸಕ ರಾಜುಗೌಡ

Advertisement

ಅಪ್ರಾಪ್ತೆ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅರ್ಜಿದಾರ ದರ್ಶನ್‌ (19) ಅನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಪರಪ್ಪನ ಕೇಂದ್ರ ಕಾರಾಗೃಹ ಸೇರಿರುವ ಆರೋಪಿ, ಪರೀಕ್ಷೆ ಬರೆಯುವುದಕ್ಕಾಗಿ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದ.

ಹೈಕೋರ್ಟ್‌ ವಿಧಿಸಿದ್ದ ಷರತ್ತುಗಳೇನು?
– ವೇಳಾಪಟ್ಟಿ ನಿಗದಿಯಾಗಿರುವ ದಿನಗಳಲ್ಲಿ ರಾಜಾಜಿನಗರದ ವಿವೇಕಾಂದ ಕಾಲೇಜಿನಲ್ಲಿ ಅರ್ಜಿದಾರ ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರ ಮುಖ್ಯಸ್ಥರು/ಮುಖ್ಯ ಪರಿವೀಕ್ಷಕರು ಪರೀಕ್ಷೆ ಬರೆಯಲು ಅರ್ಜಿದಾರನಿಗೆ ಪ್ರತ್ಯೇಕ ಕೋಠಡಿ ವ್ಯವಸ್ಥೆ ಮಾಡಬೇಕು.

– ಆರೋಪಿಯನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಜೈಲಿನಿಂದಲೇ ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪರೀಕ್ಷೆ ಮುಗಿದ ನಂತರ ಜೈಲಿಗೆ ವಾಪಸ್‌ ಕರೆದೊಯ್ಯಬೇಕು. ಜೈಲು ಅಧಿಕಾರಿಗಳು ಆರೋಪಿ ಖರ್ಚಿನಲ್ಲಿಯೇ ಪರೀಕ್ಷಾ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು.

– ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಜೈಲಿಗೆ ಹಿಂದಿರುವಾಗ ಆರೋಪಿ ಕೈಗೆ ಬೇಡಿ ಹಾಕಬಾರದು. ಆರೋಪಿ ಘನತೆ ಮತ್ತು ಗೌಪತ್ಯತೆ ಕಾಪಾಡುವ ದೃಷ್ಟಿಯಿಂದ ಬೆಂಗಾವಲು ಪಡೆಯ ಭದ್ರತಾ ಸಿಬ್ಬಂದಿ ಸಮವಸ್ತ್ರ ಧರಿಸಬಾರದು. ಭದ್ರತಾ ಸಿಬ್ಬಂದಿ ನಿಯೋಜನೆಗೆ ಆಗುವ ಖರ್ಚನ್ನು ಅರ್ಜಿದಾರ ಮುಂಚಿತವಾಗಿಯೇ ಜೈಲು ಪ್ರಾಧಿಕಾರಕ್ಕೆ ಪಾವತಿಸಬೇಕು.

– ಪರೀಕ್ಷೆ ಮುಗಿದ ನಂತರ ಮುಂದಿನ ಪರೀಕ್ಷಾ ದಿನಾಂಕದವರೆಗೆ ಅರ್ಜಿದಾರ ಕೇಂದ್ರ ಕಾರಾಗೃಹದಲ್ಲಿಯೇ ಇರಬೇಕು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪೋಷಕರು ಒದಗಿಸುವ ಅಗತ್ಯ ಪುಸ್ತಕಗಳನ್ನು ಜೈಲು ಅಧಿಕಾರಿಗಳು ಅರ್ಜಿದಾರನಿಗೆ ಪೂರೈಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next