ಬೆಂಗಳೂರು : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷಾ ಪ್ರಕ್ರಿಯೆಯ ಮಾರ್ಗಸೂಚಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
2019ರ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲಿ ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ದಾಖಲಾತಿ, ಶುಲ್ಕ ವಿವರ, ಅಂಕಗಳ ವಿವರ, ಪರೀಕ್ಷಾ ವಿಧಾನ, ಶಾಲಾ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮ ಮತ್ತು ಶಿಕ್ಷಣಾಧಿಕಾರಿಗಳ ಜವಾಬ್ದಾರಿ ಸಹಿತವಾಗಿ ಎಲ್ಲ ಅಂಶ ವಿಸ್ತೃತವಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮೊದಲ ಬಾರಿಗೆ ಪರೀಕ್ಷೆ ಬರೆಯಲಿರುವ ಶಾಲಾ ಅಭ್ಯರ್ಥಿಗಳು ಮತ್ತು ಖಾಸಗಿ ಅಭ್ಯರ್ಥಿಗಳಿಗೆ 440 ರೂ. ಪರೀಕ್ಷಾ ಶುಲ್ಕ ಹಾಗೂ 20 ರೂ. ಲ್ಯಾಮಿನೇಷನ್ ಶುಲ್ಕ ಸಹಿತವಾಗಿ 460 ರೂ. ನಿಗದಿ ಮಾಡಲಾಗಿದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಒಂದು ವಿಷಯಕ್ಕೆ 290 ರೂ., ಎರಡು ವಿಷಯಕ್ಕೆ 350 ರೂ. ಹಾಗೂ ಮೂರು, ಮೂರಕ್ಕಿಂತ ಹೆಚ್ಚಿನ ವಿಷಯಕ್ಕೆ 470 ರೂ. ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಪರೀಕ್ಷಾ ಶುಲ್ಕವನ್ನು ಶಾಲಾ ಮುಖ್ಯಶಿಕ್ಷಕರು ಆನ್‌ಲೈನ್ ಮೂಲಕವೇ ಪಾತಿಸಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಎಸ್‌ಎಟಿಎಸ್ ಜಾಲತಾಣದಲ್ಲೇ ಇದಕ್ಕೆ ವ್ಯವಸ್ಥೆ ಮಾಡಿರುವುದಿಂದ ಶಾಲಾ ಮುಖ್ಯಶಿಕ್ಷಕರು ಇದರ ಸದುಪಯೋಗ ಮಾಡಿಕೊಳ್ಳುವಂತೆಯೂ ಸೂಚಿಸಿದೆ.
ರಾಜ್ಯದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಿಸಿದ ತಾಲೂಕಿನಲ್ಲಿ ನಡೆಯುತ್ತಿರುವ ಪ್ರೌಢ ಶಾಲೆಗಳು ಅಧಿಕೃತವೇ ಅಥವಾ ಅನಧಿಕೃತ ಶಾಲೆಯೇ ಎಂಬ ಬಗ್ಗೆ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಗೆ ಅ.25ರೊಳಗೆ ಮಾಹಿತಿ ನೀಡುವಂತೆ ನಿರ್ದೇಶಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಮಾಹಿತಿ ಅನಧಿಕೃತವಾಗಿದ್ದು, ಶಾಲೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡರೆ ಶಿಕ್ಷಣಾಧಿಕಾರಿಗಳೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಶಾಲಾ ಮುಖ್ಯಶಿಕ್ಷಕರು ಅ.20ರೊಳಗೆ ಶಾಲಾ ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳ ಮಾಹಿತಿ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ(ಎಸ್‌ಎಟಿಎಸ್) ಅಪ್‌ಲೋಡ್ ಮಾಡಬೇಕು. ಜತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನ.20ರೊಳಗೆ ಸಲ್ಲಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ.