Advertisement
ನ್ಯಾಯಮೂರ್ತಿಗಳಾದ ಬಿ.ಎಸ್ ಪಾಟೀಲ್ ಹಾಗೂ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ, ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶದ ಅಧಿಸೂಚನೆ ಸಂವಿಧಾನ ಬಾಹಿರ. ವಾಸ್ತವವಾಗಿ ವಿಧಿಸಲಾಗಿರುವ ಕೆಲ ನಿಯಮಗಳ ಪಾಲನೆ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟು, ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಈ ಮೊದಲು ಬೀಡಿ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಕವರ್ ಅಥವಾ ಪಾಕೆಟ್ ಮೇಲೆ ಶೇ. 40ರಷ್ಟು ಎಚ್ಚರಿಕೆ ಸಂದೇಶ ವಿತ್ತು. ಈ ನಿಯಮ ಮಾರ್ಪಡುಗೊಳಿಸಿ ಕೇಂದ್ರ ಆರೋಗ್ಯ ಇಲಾಖೆ ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಆರೋಗ್ಯಕ್ಕೆ ಹಾನಿಕಾರಕ ಎಂಬ ಚಿತ್ರ ಸಹಿತ ಸಂದೇಶವನ್ನು ಕಡ್ಡಾಯವಾಗಿ ಪ್ರಕಟಿಬೇಕೆಂದು 2014ರ ಅಕ್ಟೋಬರ್ 15ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿರುವ ತಂಬಾಕು ಉತ್ಪನ್ನಗಳ ತಯಾರಿಕಾ ಕಂಪೆನಿಗಳು ಆಯಾ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್ ಮೊರೆಹೋಗಿದ್ದವು. ಈ ಕುರಿತು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಎಲ್ಲ ರಿಟ್ಅರ್ಜಿಗಳನ್ನು ವಿಚಾರಣೆ ನಡೆಸಿ ತೀರ್ಪು ನೀಡಲು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಿತ್ತು
ಈ ಹಿಂದೆ ಇದ್ದ ನಿಯಮವನ್ನು ಮಾರ್ಪಾಡುಗೊಳಿಸಿ ಕೇಂದ್ರ ಸರ್ಕಾರ ಶೇ.85ರಷ್ಟು ಎಚ್ಚರಿಕೆ ಸಂದೇಶ ಪ್ರಕಟಿಸಬೇಕೆಂಬ
ನಿಯಮ ಜಾರಿಗೊಳಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ. ಈಗಾಗಲೇ ತಂಬಾಕು ಉತ್ಪನ್ನ ಕಂಪೆನಿಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿವೆ. ಅಲ್ಲದೆ ತಂಬಾಕು ಬೆಳೆಗಾರರಿಗೂ ತೊಂದರೆಯಾಗಲಿದೆ. ಹೊಸ ನಿಯಮ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆದೇಶ ರದ್ದುಪಡಿಸುವಂತೆ ಕೋರಿ ದೇಶದ ವಿವಿಧ ಸಿಗರೇಟ್ ಕಂಪೆನಿಗಳು ಹಾಗೂ ತಂಬಾಕು ಉತ್ಪನ್ನ ಕಂಪೆನಿಗಳು ಹೈಕೋರ್ಟ್ ಮೊರೆ ಹೋಗಿದ್ದವು.