Advertisement

ಸೈನೈಡ್‌ ಮೋಹನ್‌ಗಿಲ್ಲ ಗಲ್ಲು, ಸಾಯೋತನಕ ಜೈಲು

06:10 AM Oct 13, 2017 | |

ಬೆಂಗಳೂರು: ಬಂಟ್ವಾಳದ ಅನಿತಾ ಎಂಬಾಕೆಗೆ ಸೈನೆಡ್‌ ನೀಡಿ ಕೊಲೆಗೈದು ದರೋಡೆ ಮಾಡಿದ ಪ್ರಕರಣದಲ್ಲಿ ಸರಣಿ ಹಂತಕ ಮೋಹನ್‌ ಕುಮಾರ್‌ ಅಲಿಯಾಸ್‌ ಸೈನೆಡ್‌ ಮೋಹನ್‌ನನ್ನು ಅಪರಾಧಿ ಎಂದು ಘೋಶಿಸಿರುವ ಹೈಕೋರ್ಟ್‌, ಅಧೀನ ನ್ಯಾಯಾಲಯ ಆತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಡುಗೊಳಿಸಿ ಜೀವಿತಾವಧಿವರೆಗೂ ಜೈಲು ಶಿಕ್ಷೆ ವಿಧಿಸಿ ತೀರ್ಪುನೀಡಿದೆ.

Advertisement

ಅನಿತಾ ಕೊಲೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕೆ ರದ್ದುಪಡಿಸಬೇಕು ಮತ್ತು ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸುವಂತೆ ಅಪರಾಧಿ ಮೋಹನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು. ಹಾಗೆಯೆ, ಗಲ್ಲು ಶಿಕ್ಷೆ ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕ್ರಿಮಿನಲ್‌ ರೆಫ‌ರ್ಡ್‌ ಕೇಸ್‌ ಅರ್ಜಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ಈ ಎರಡೂ ಅರ್ಜಿಗಳ ವಿಚಾರಣೆ ಬುಧವಾರವೇ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿಗಳಾದ ರವಿ ಮಳೀಮಠ ಮತ್ತು ನ್ಯಾ.ಜಾನ್‌ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಗುರುವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿ ಪ್ರಕ್ರಿಯೆ ಪೂರ್ಣಗೊಳಿಸಿತು.

ಅಧೀನ ನ್ಯಾಯಾಲಯವು  ಆರೋಪಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಕಡಿಮೆಗೊಳಿಸಿದ ಹೈಕೋರ್ಟ್‌, ಸಾಯುವವರೆಗೂ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಜೀವಿತಾವಧಿಯ ಕೊನೆವರೆಗೂ ಜೈಲಿನಿಂದ ಅಪರಾಧಿ ಮೋಹನ್‌ ಕುಮಾರ್‌ ಅಲಿಯಾಸ್‌ ಸೈನೆಡ್‌ಮೋಹನ್‌ಗೆ ಬಿಡುಗಡೆ ಮಾಡಬಾರದು ಮತ್ತು ಕ್ಷಮಾದಾನ ಸಹ ನೀಡಬಾರದು ಎಂದು ತೀರ್ಪು ನೀಡಿತು.

ಮೂವರು ಮಹಿಳೆಯರ ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯವು ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅದರಲ್ಲಿ ಒಂದು ಪ್ರಕರಣವನ್ನು ಹೈಕೋರ್ಟ್‌ಗೆ ಗುರುವಾರ ಬಗೆಹರಿಸಿದ್ದು, ಇನ್ನೆರಡು ಪ್ರಕರಣಗಳ ವಿಚಾರಣೆ ನಡೆಸಬೇಕಿದೆ. ಮತ್ತೂಂದು ಪ್ರಕರಣದ ವಿಚಾರಣೆ ಅ.23ಕ್ಕೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. ವಿಚಾರಣೆಗೆ ಖುದ್ದು ಹಾಜರಾಗಿದ್ದ ಮೋಹನ್‌ನನ್ನು ಜೈಲಿಗೆ ವಾಪಸ್‌ ಕರೆದುಕೊಂಡು ಹೋಗಿ, ಅ.23ರಂದು ಮತ್ತೆ ವಿಚಾರಣೆಗೆ ಕರೆತರುವಂತೆ ಜೈಲಾಧಿಕಾರಿಗಳಿಗೆ ನ್ಯಾಯಪೀಠ ನಿರ್ದೇಶಿಸಿತು.

ಮೋಹನ್‌ ಪೂರ್ವಯೋಜಿತವಾಗಿ ಅನಿತಾಳ ಕೊಲೆ ಮಾಡಿದ್ದು, ಆಕೆಯ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾನೆ ಅಪರಾಧ ಕೃತ್ಯಗಳನ್ನು ಮಾಡಲೆಂದೇ ಶಿಕ್ಷಕ ವೃತ್ತಿಯನ್ನು ಬಿಟ್ಟಿರುವ ಆತನು ಸುಮಾರು 20 ಅಮಾಯಕ ಮಹಿಳೆಯರನ್ನು ಕೊಲೆಗೈದು ದರೋಡೆ ಮಾಡಿ ಪರಾರಿಯಾಗಿದ್ದನು. ಹೀಗಾಗಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿರುವ ಅಧೀನ ನ್ಯಾಯಾಲಯದ ಕ್ರಮ ಸರಿಯಿದ್ದು, ಹೈಕೋರ್ಟ್‌ ಗಲ್ಲು  ಶಿಕ್ಷೆ ಖಾಯಂಗೊಳಿಸಬೇಕೆಂದು  ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ವಿಜಯ್‌ಕುಮಾರ್‌ ವಾದಿಸಿದ್ದರು. ಮತ್ತೂಂದೆಡೆ ತನ್ನ ಪರ ಖುದ್ದು ವಾದ ಮಂಡಿಸಿದ ಮೋಹನ್‌ ಸಾಧಾರಣ ಜೈಲು ಶಿಕ್ಷೆ ವಿಧಿಸುವಂತೆ ಕೋರಿದ್ದನು.

Advertisement

ವಿಭಾಗೀಯ ಪೀಠವು ವಾದ-ಪ್ರತಿವಾದ ಆಲಿಸಿದ್ದು, ಅನಿತಾ ಕೊಲೆ  ಸೇರಿ ಇತರೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ನಂತರ ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು  ಅಮಾಯಕ ಮಹಿಳೆಯರಿಗೆ ಸೈನೈಡ್‌ ನೀಡಿ ಕೊಲೆ ಮಾಡಿದ್ದಾನೆ . ಜತೆಗೆ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಎಲ್ಲ ಪ್ರಕರಣಗಳು ಒಂದೇ ರೀತಿಯಲ್ಲಿ ಇರುವುದರಿಂದ ಇದು ಅಪರೂಪದಲ್ಲೇ ಅಪರೂಪ ಪ್ರಕರಣ ಎಂದು ಅಭಿಪ್ರಾಯಪಟ್ಟು ಅಧೀನ ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. 

ಆದರೆ, ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಇದು ಅಪರೂಪದಲ್ಲೇ ಅಪರೂಪ ಪ್ರಕರಣ ಎಂದು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ.ಅನಿತಾ ಮೇಲೆ ಅತ್ಯಾಚಾರ ನಡೆಸಿರುವುದು ಸಹ ಸಾಬೀತಾಗಿಲ್ಲ.  ಮೇಲಾಗಿ ಮೃತ ಸಂತ್ರಸ್ತರಿಗೆ ಅಪರಾಧಿಯು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿಲ್ಲ. ಇದರಿಂದ ಪ್ರಕರಣವು ಸಾಮಾನ್ಯ ಅಪರಾಧ ಕೃತ್ಯವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್‌ ಬಚ್ಚನ್‌ ಸಿಂಗ್‌ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಅಪರಾಧಿ ಮೋಹನ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next