Advertisement
ರಾಜ್ಯದ ಪ್ರತೀ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಮೇವು, ನೀರು ಮತ್ತು ಜಾಗ ಒದಗಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಶೀಘ್ರ ಕಾರ್ಯಾರಂಭ
ರಾಜ್ಯದ ಪ್ರತೀ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಹೈಕೋರ್ಟ್ ಹೇಳಿತ್ತು. ಈವರೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರಕಾರದ ಪರ ವಕೀಲರು, ಬೆಂಗಳೂರಿನಲ್ಲಿ ಭೂಮಿ ವರ್ಗಾವಣೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿವೆ. ಬೆಂಗಳೂರು ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲಾಗುತ್ತಿದೆ. ಆ ಕುರಿತು ಈಗಾಗಲೇ ಜಿಲ್ಲಾಮಟ್ಟದ ಸಮಿತಿ ರಚಿಸಲಾಗಿದೆ. ನೀರಿನ ಸೌಲಭ್ಯ ಕಲ್ಪಿಸಲು ಹಲವೆಡೆ ಬೋರ್‌ವೆಲ್ ಕೊರೆಸಲಾಗಿದ್ದು, ಶೆಡ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಜುಲೈ 15ರ ವೇಳೆಗೆ 5 ಗೋಶಾಲೆ ಕಾರ್ಯಾರಂಭ ಮಾಡಲಿವೆ. ಆಗಸ್ಟ್ 1ರ ವೇಳೆಗೆ ಮತ್ತೆ 10 ಗೋಶಾಲೆ ಆರಂಭವಾಗಲಿದೆ ಎಂದು ವಿವರಿಸಿದರು.
Related Articles
Advertisement
ಹಾಗಾದರೆ, ರಾಜ್ಯದೆಲ್ಲೆಡೆ ಸರಕಾರದ ವತಿಯಿಂದ ಗೋ ಶಾಲೆಗಳನ್ನು ತೆರೆಯುವುದು ಸರಕಾರದ ಪಂಚ ವಾರ್ಷಿಕ ಯೋಜನೆಯೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ಖಾಸಗಿ ಗೋಶಾಲೆಗಳಿಗೂ ಸರಕಾರದ ನೆರವುಪ್ರತೀ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸಲಾಗುವುದು ಎಂದು ಸರಕಾರ ಹೇಳಿರುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಸರಕಾರಿ ವಕೀಲರು ಉತ್ತರಿಸಿ, ಸರಕಾರದ ಹೊರತಾಗಿ ಖಾಸಗಿ ಸಂಘ-ಸಂಸ್ಥೆಗಳು 197 ಗೋಶಾಲೆಗಳನ್ನು ಆರಂಭಿಸಿದ್ದಾರೆ. ಅವುಗಳಿಗೂ ಸರಕಾರ ಆರ್ಥಿಕ ನೆರವು ನೀಡುತ್ತಿದೆ ಎಂದು ತಿಳಿಸಿದರು. ಅಲ್ಲದೆ ಗೋಶಾಲೆ ಆರಂಭಿಸುವ ಕುರಿತ ವಸ್ತುಸ್ಥಿತಿ ವರದಿ ಸಿದ್ಧವಾಗಿದ್ದು, ಅದನ್ನು ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿತು. ಎಪಿಪಿ ಹುದ್ದೆ ಭರ್ತಿ: 6 ವಾರ ಗಡುವು
ಬೆಂಗಳೂರು: ಖಾಲಿ ಇರುವ 205 ಸಹಾಯಕ ಸರಕಾರಿ ಅಭಿಯೋಜಕ (ಎಪಿಪಿ) ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 6 ವಾರಗಳ ಗಡುವು ನೀಡಿದೆ. ರಾಜ್ಯದಲ್ಲಿ ಖಾಲಿ ಇರುವ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಕೊರತೆ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್, 205 ಎಪಿಪಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿ 2022ರ ಮೇ 28 ಹಾಗೂ 29ರಂದು ಪರೀಕ್ಷೆ ನಿಗದಿಪಡಿಸಲಾಗಿತ್ತು. ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಕರಡು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿತ್ತು. ಇದರ ಬಗ್ಗೆ ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿ, ಕರಡು ಪ್ರಶ್ನೆ ಪತ್ರಿಕೆಯಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚಿವೆ. ಇದರಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಮಸ್ಯೆ ಆಗಲಿದೆ. ಅಷ್ಟಕ್ಕೂ ಎಪಿಪಿ ಹುದ್ದೆಗಳಿಗೆ ಸಾಂವಿಧಾನಿಕ ವಿಷಯಗಳಿಗಿಂತ ಐಪಿಸಿ-ಸಿಆರ್‌ಪಿಸಿ ವಿಷಯಗಳು ಮುಖ್ಯವಾಗಿ ಬೇಕು ಎಂದು ವಕೀಲರ ಪರಿಷತ್ ಮತ್ತು ವಕೀಲರ ಸಂಘದ ವಾದವಾಗಿತ್ತು. ಆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಎರಡು ತಿಂಗಳು ಕಾಲಾವಕಾಶ ಕೊಟ್ಟರೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗುವುದು ಎಂದು ಕೋರಿಕೊಂಡರು. ಅದಕ್ಕೆ ಎರಡು ತಿಂಗಳು ಕಾಲಾವಕಾಶ ನೀಡುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನೇ ನೀಡಲಾಗಿದೆ. ಆದ್ದರಿಂದ 6 ವಾರಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ ಅಭಿಯೋಜನ ಇಲಾಖೆಯ ನಿರ್ದೇಶಕರು ಮುಂದಿನ ವಿಚಾರಣೆಗೆ ಹಾಜರಿರಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತು. ಲೋಕಾಯುಕ್ತರ ನೇಮಕ: ವಿಚಾರಣೆ ಮುಂದಕ್ಕೆ
ಬೆಂಗಳೂರು: ರಾಜ್ಯದ ಲೋಕಾಯುಕ್ತರ ಹುದ್ದೆ ಭರ್ತಿ ಮಾಡುವುದಕ್ಕೆ ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಈ ಕುರಿತು ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಅರ್ಜಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯ ಮೂರ್ತಿಗಳು, ಲೋಕಾಯುಕ್ತರ ನೇಮಕಾತಿ ವಿಚಾರ ಪರಿಗಣನೆಯಲ್ಲಿದೆ. ಈ ಸಂಬಂಧ ಮುಖ್ಯಮಂತ್ರಿಯವರ ಸಮಾಲೋಚನ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ನಿಮಗೆ ಮಾಹಿತಿ ತಿಳಿಯಲಿದೆ. ಹಾಗಾಗಿ, ನಿಮ್ಮ ಅರ್ಜಿಯ ಆವಶ್ಯಕತೆ ಕಂಡು ಬರುತ್ತಿಲ್ಲ ಎಂದು ಅರ್ಜಿದಾರರಿಗೆ ಹೇಳಿದರು. ಅದಾಗ್ಯೂ ಅರ್ಜಿಯನ್ನು 10 ದಿನಗಳ ಮಟ್ಟಿಗೆ ಮುಂದೂಡಿ ಎಂದು ಅರ್ಜಿದಾರ ವಕೀಲರು ಮನವಿ ಮಾಡಿಕೊಂಡರು. ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು. ಕೂಡಲೇ ನಿರ್ದೇಶಿಸಿ-ಕೋರಿಕೆ
ನಾಲ್ಕು ತಿಂಗಳಿನಿಂದ ಲೋಕಾ ಯುಕ್ತರ ಹುದ್ದೆ ಖಾಲಿಯಿದೆ. 2019ರಲ್ಲಿ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಬಳಿಕ ಸರಕಾರ ಲೋಕಾಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ಆದ್ದರಿಂದ ಕೂಡಲೇ ಲೋಕಾಯುಕ್ತರ ನೇಮಕ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.