Advertisement

ಸಂತ್ರಸ್ತೆಯನ್ನು ಪಾಟೀ ಸವಾಲಿಗೊಳಪಡಿಸಬಹುದು

12:18 AM Mar 26, 2022 | Team Udayavani |

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತರು ಪ್ರತಿಕೂಲ ಸಾಕ್ಷ್ಯ ನುಡಿದರೆ ಅವರನ್ನೂ ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ಹೈಕೋರ್ಟ್‌ ಹೇಳಿದೆ.

Advertisement

ಪೋಕ್ಸೊ ಪ್ರಕರಣವೊಂದರಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ಅನುಮತಿ ನಿರಾಕರಿಸಿದ್ದ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪೋಕ್ಸೊ ಕಾಯ್ದೆ-2012ರ ಸೆಕ್ಷನ್‌ 33 (2)ರ ಪ್ರಕಾರ ಅಪ್ರಾಪ್ತ ವಯಸ್ಕ ಸಂತ್ರಸ್ತರು ಪ್ರತಿಕೂಲ ಸಾಕ್ಷ್ಯ ನುಡಿದ ಸಂದರ್ಭ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಅವಕಾಶವಿದೆ. ಆದರೆ, ಪಾಟೀ ಸವಾಲಿನ ವೇಳೆ ಕೇಳುವ ಪ್ರಶ್ನೆಗಳನ್ನು ಸರಕಾರಿ ಅಭಿಯೋಜಕರು ಅಥವಾ ಇತರ ಆರೋಪಿಗಳ ಪರ ವಕೀಲರು ವಿಶೇಷ ನ್ಯಾಯಾಲಯದ ಮುಂದಿಡಬೇಕು. ಅದೇ ಪ್ರಶ್ನೆಗಳನ್ನು ನ್ಯಾಯಾಲಯ ಸಂತ್ರಸ್ತರ ಮುಂದಿಟ್ಟು, ಅವರಿಂದ ವಿವರಣೆ ಪಡೆಯಬೇಕು. ಸೆಕ್ಷನ್‌ 33 (2) ಪ್ರಕಾರ ಇದು ಕಡ್ಡಾಯ ಪ್ರಕ್ರಿಯೆಯೂ ಆಗಿದೆ. ಆದ್ದರಿಂದ, ಪೋಕ್ಸೊ ಕಾಯ್ದೆಯ ನಿಯಮಗಳ ಅನುಸಾರವೇ ಸಂತ್ರಸ್ತರ ಪಾಟೀ ಸವಾಲು ನಡೆಸಬೇಕು. ಈ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾ ಧೀಶರೂ ಸಾಕಷ್ಟು ಎಚ್ಚರ ವಹಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

ಪಾಟೀ ಸವಾಲು ನಡೆಸಲು ಸರಕಾರಕ್ಕೆ ಅನುಮತಿ ನಿರಾಕರಿಸಿ ವಿಚಾರಣಾ ಕೋರ್ಟ್‌ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌, ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ಜತೆಗೆ, ಪೋಕ್ಸೊ ಕಾಯ್ದೆ ಸೆಕ್ಷನ್‌ 33 (2) ಪ್ರಕಾರ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ಸರಕಾರಿ ಅಭಿಯೋಜಕರಿಗೆ ಅನುಮತಿ ನೀಡುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಕರಣವೇನು?
2018ರ ಡಿ. 2ರಂದು ಬಾಲಕಿಯೊಬ್ಬಳಿಗೆ ಮದುವೆ ಮಾಡಲಾಗಿತ್ತು. ವಯಸ್ಕಳಲ್ಲ ಎಂದು ತಿಳಿದಿದ್ದರೂ ಆಕೆಯೊಂದಿಗೆ ಪತಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನುವ ಆರೋಪದಲ್ಲಿ 2019ರ ಎ. 29ರಂದು ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

Advertisement

ಪೊಲೀಸರು ಐಪಿಸಿ 376(ಎನ್‌), ಪೋಕ್ಸೊ ಕಾಯ್ದೆ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಕಿಯ ಪತಿ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ದಲ್ಲಿ 2019ರ ಸೆ. 16ರಂದು ಸಾಕ್ಷ್ಯಗಳ ಹೇಳಿಕೆ ದಾಖಲಿಸಿಕೊಳ್ಳುವಾಗ, ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಳು. ಇದರಿಂದ, ಸರಕಾರ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ವಿಚಾರಣಾ ನ್ಯಾಯಾಲಯದ ಅನುಮತಿ ಕೇಳಿತ್ತು. ಆದರೆ, ವಿಚಾರಣಾ ಕೋರ್ಟ್‌ ಸರಕಾರಕ್ಕೆ ಅನುಮತಿ ನಿರಾಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next