ಬೆಂಗಳೂರು: ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಮುಖಂಡ, ವಕೀಲ ಜಿ. ದೇವರಾಜೇಗೌಡಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ
ಏಕಸದಸ್ಯ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಸೋಮವಾರ ಮಧ್ಯಾಂತರ ಆದೇಶ ಹೊರಡಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆ ನಡೆದು 90 ದಿನಗಳ ಬಳಿಕ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ವೀಡಿಯೋ ಕಾಲ್‌ಗಳನ್ನು ಏಕೆ ಸ್ವೀಕರಿಸಿದ್ದರೆಂಬುದಕ್ಕೆ ಸಮರ್ಥನೆ ಕಾಣುತ್ತಿಲ್ಲ ಎಂದು ಜಾಮೀನು ಮಂಜೂರು ಮಾಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್, 2023ರ ಡಿ. 29ರಂದು ಅತ್ಯಾಚಾರ ನಡೆಸಿದ್ದಾರೆಂದು 2024ರ ಎ. 1ರಂದು ದೂರು ನೀಡಿದ್ದಾರೆ. ಅದಕ್ಕೂ ಮೊದಲು ಮಾ. 29ರಂದೇ ಹನಿ ಟ್ರಾಪ್ ಎಂದು ದೇವರಾಜೇಗೌಡ ದೂರು ನೀಡಿದ್ದಾರೆ. ಮಾ. 29ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆಯ ಪತಿ ದೂರು ನೀಡಿದ್ದಾರೆ, ಆದರೆ ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ.ಆ ಪ್ರಕರಣದಲ್ಲಿ ಪೊಲೀಸರು “ಬಿ’ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.