Advertisement

ರಾಜ್ಯ ಸರ್ಕಾರಕ್ಕೆ ಹೈ ಬರದ ಚಾಟಿ

09:45 AM May 06, 2019 | mahesh |

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಬರಪೀಡಿತ 156 ತಾಲೂಕುಗಳಲ್ಲಿ ಅಗತ್ಯವಿರುವೆಡೆಗಳಲ್ಲಿ ಗೋಶಾಲೆಗಳನ್ನು ಆರಂಭಿಸಿ, ಅಲ್ಲಿ ಮೇವು, ಕುಡಿಯುವ ನೀರು ಮತ್ತು ಔಷಧಿಗಳ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶುಕ್ರವಾರ ತಾಕೀತು ಮಾಡಿದೆ.

Advertisement

ಈ ಕುರಿತಂತೆ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಆರ್‌. ದೇವದಾಸ್‌ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ ಈ ತಾಕೀತು ಮಾಡಿತು.

ರಾಜ್ಯದ ಬರಪೀಡಿತ 156 ತಾಲೂಕುಗಳಲ್ಲಿ ಅಗತ್ಯವಿರುವ ಕಡೆ ಗೋಶಾಲೆ ಆರಂಭಿಸಿ ಅಲ್ಲಿ ಅಗತ್ಯ ಪ್ರಮಾಣದಲ್ಲಿ ಜಾನುವಾರುಗಳಿಗೆ ಮೇವು, ಕುಡಿಯಲು ನೀರು ಹಾಗೂ ಔಷಧಿಗಳ ವ್ಯವಸ್ಥೆ ಮಾಡಬೇಕು. ಆಯಾ ತಾಲೂಕಿನ ತಹಶೀಲ್ದಾರ್‌ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಅದರ ಜವಾಬ್ದಾರಿ ಕೊಡಬೇಕು. ಗೋಶಾಲೆ ಆರಂಭಿಸುವ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ದಾಖಲೆ ಸಮೇತ ವರದಿ ಕೊಡಿ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಬರ ನಿರ್ವಹಣೆ ಕುರಿತು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಆದರೆ, ಇದನ್ನು ಒಪ್ಪದ ನ್ಯಾಯಪೀಠ, ನೀವು ಹೇಳುತ್ತಿರುವುದು ನಂಬುವುದು ಹೇಗೆ? ಸ್ಥಳದಲ್ಲಿ ವಾಸ್ತವ ಸಂಗತಿ ಏನಿದೆ ಎಂದು ನಮಗಂತೂ ನೋಡಲು ಸಾಧ್ಯವಿಲ್ಲ. ಆದ್ದರಿಂದ 156 ತಾಲೂಕುಗಳಲ್ಲಿ ಗೋಶಾಲೆ ಆರಂಭ ಸೇರಿದಂತೆ ಬರ ನಿರ್ವಹಣೆ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ದಾಖಲೆ ಸಮೇತ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ, ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿತು.

ಇದಕ್ಕೂ ಮೊದಲು ರಾಜ್ಯ ಸರ್ಕಾರದ ಕ್ರಮಗಳನ್ನು ವಿವರಿಸಿದ ಸರ್ಕಾರದ ಪರ ವಕೀಲರು, ರಾಜ್ಯದ ಕೊಪ್ಪಳ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಗೋಶಾಲೆ ತೆರಯಲಾಗಿದೆ. ಅಗತ್ಯ ಪ್ರಮಾಣದ ಮೇವು ದಾಸ್ತಾನು ಮಾಡಲಾಗಿದೆ. ಶಾಸಕರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅವರು ಒಳಗೊಂಡ ಟಾಸ್ಕ್ಫೋರ್ಸ್‌ ರಚಿಸಲಾಗಿದೆ ಎಂದರು.

Advertisement

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಎನ್‌.ಪಿ. ಅಮೃತೇಶ್‌, ಬರ ನಿರ್ವಹಣೆ ಮತ್ತು ಜಾನುವಾರುಗಳಿಗೆ ಗೋಶಾಲೆ ತೆರೆದು, ಮೇವು, ನೀರು ಪೂರೈಸುವ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next