Advertisement

ಕೊಡವ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಅಧ್ಯಯನದ ಮಾನದಂಡ ಪರಿಶೀಲಿಸಲು ಹೈಕೋರ್ಟ್‌ ಸೂಚನೆ

09:21 PM Jul 20, 2021 | Team Udayavani |

ಬೆಂಗಳೂರು: ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಡಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅಧ್ಯಯನ ವರದಿಯನ್ನು ಪರಿಗಣಿಸುವ ಮೊದಲು ಸೂಕ್ತ ಮಾನದಂಡಗಳನ್ನು ಅನುಸರಿಸಿ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ಅಧ್ಯಯನದ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯನ್ನು ರದ್ದಪಡಿಸುವಂತೆ ಕೋರಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ನಿರ್ದೇಶನ ನೀಡಿದೆ.

ಕೊಡವ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯನ್ನು ಸರ್ಕಾರದ ಪರಿಶೀಲನೆಗಾಗಿ ಇಡಲಾಗಿದೆ.

ಆದರೆ, ಸೂಕ್ತ ಮಾನದಂಡ ಅನುಸರಿಸಿ ಅಧ್ಯಯನ ನಡೆಸಿಲ್ಲ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ಕೇವಲ ಈ ವರದಿ ಆಧರಿಸಿ ಸರ್ಕಾರ ತೀರ್ಮಾನ ಕೈಗೊಳ್ಳಬಾರದು. ವರದಿಯನ್ನು ಒಪ್ಪುವ ಮುನ್ನ ಅಧ್ಯಯನ ನಡೆಸಲು ಕೊಡವ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಕುರಿತಾಗಿ ಅಧ್ಯಯನ ನಡೆಸಲು 2016ರ ಡಿ.1ರಂದು ಹೊರಡಿಸಿದ ಆದೇಶದಲ್ಲಿ ವಿಧಿಸಿದ್ದ ಷರತ್ತು ಮತ್ತು ಮಾನದಂಡಗಳಿಗೆ ಅನುಗುಣವಾಗಿ ಅಧ್ಯಯನ ನಡೆಸಲಾಗಿದೆಯೇ ಎಂದು ಸರ್ಕಾರ ಪರಿಶೀಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಇದನ್ನೂ ಓದಿ :ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಿಎಂ ಆದೇಶ

Advertisement

ಅಲ್ಲದೆ, ವರದಿಯನ್ನು ಪರಿಶೀಲಿಸುವ ವೇàಳೆ ಸೂಕ್ತವಾದ ಮಾನದಂಡ ಅನುಸರಿಸಿ ಅಧ್ಯಯನ ನಡೆಸಲಾಗಿದೆಯೇ? ಎಂದು ಗಮನಿಸಬೇಕು ಹಾಗೂ ಅಧ್ಯಯನ ಕುರಿತು ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಬೇಕು. ಒಂದೊಮ್ಮೆ ಸೂಕ್ತ ಮಾನದಂಡ ಅನುಸರಿಸಿ ಅಧ್ಯಯನ ನಡೆಸಿಲ್ಲ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದರೆ, ಹೊಸದಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸುವುದಕ್ಕೆ ಆದೇಶಿಸಲು ಸರ್ಕಾರ ಮುಕ್ತವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್‌. ಪೊನ್ನಣ್ಣ ವಾದ ಮಂಡಿಸಿ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಅಧ್ಯಯನದ ವೇಳೆ ಸೂಕ್ತ ಮಾನದಂಡ ಅನುಸರಿಸಿಲ್ಲ. ಐದು ಅಂಶಗಳ ಆಧಾರದ ಮೇಲೆ ಅಧ್ಯಯನ ನಡೆಸಲು ಸರ್ಕಾರ ಆದೇಶಿತ್ತು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಅಧ್ಯಯನ ನಡೆಸಲಾಗಿದೆ. ಅಧ್ಯಯನ ವೇಳೆ ಸಿದ್ಧಪಡಿಸಿದ ಪ್ರಶ್ನಾವಳಿ ಕೂಡ ಸಮಂಜಸವಾಗಿರಲಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಮಾನದಂಡದ ಮೇಲೆ ಅಧ್ಯಯನ ನಡೆಸಲಾಗಿದೆ. ಆದರೆ, ಜನಾಂಗೀಯ ಅಧ್ಯಯನ ನಡೆಸಬೇಕಿತ್ತು. ಹೀಗಾಗಿ, ಸಲ್ಲಿಕೆಯಾಗಿರುವ ವರದಿ ಪರಿಗಣಿಸದಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಅದಕ್ಕೆ ನ್ಯಾಯಪೀಠ, ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜತೆಗೆ, ವರದಿ ಪರಿಶೀಲನೆ ವೇಳೆ ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next