Advertisement

ಮುಷ್ಕರದಿಂದಾಗುವ ತೊಂದರೆ ತಪ್ಪಿಸಲು ಸರ್ಕಾರ, ಸಾರಿಗೆ ನಿಗಮ, ನೌಕರರಿಗೆ ಹೈಕೋರ್ಟ್‌ ಸೂಚನೆ

10:35 PM Apr 27, 2021 | Team Udayavani |

ಬೆಂಗಳೂರು: ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಜವಾಬ್ದಾರಿ ಸರ್ಕಾರ, ಸಾರಿಗೆ ನಿಗಮಗಳು ಮತ್ತು ನೌಕರರ ಮೇಲಿದೆ ಎಂದು ಹೇಳಿರುವ ಹೈಕೋರ್ಟ್‌, ಸಾರಿಗೆ ನೌಕರರ ವಜಾ, ಅಮಾನತು ಮತ್ತು ವರ್ಗಾವಣೆ ಪ್ರಕರಣಗಳನ್ನು ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರಗಳ ಮುಂದೆ ಪ್ರಶ್ನಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

Advertisement

ಸಾರಿಗೆ ನೌಕರರ ಮಷ್ಕರ ತಡೆಯಲು ಹಾಗೂ ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ, ವಕೀಲ ನಟರಾಜ್‌ ಶರ್ಮಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಕೋವಿಡ್‌ನಿಂದ ರಾಜ್ಯದಲ್ಲಿ ಸದ್ಯ ಉದ್ಭವಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಷ್ಕರ ಮುಂದುವರೆದು ಜನ ಮತ್ತಷ್ಟು ಸಂಕಷ್ಟ ಎದುರಿಸುವ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಸರ್ಕಾರ, ಸಾರಿಗೆ ನಿಗಮ ಹಾಗೂ ನೌಕರರ ಸಂಘಟನೆಯ ಅಂತಿಮ ಉದ್ದೇಶವಾಗಿರಬೇಕು ಎಂದು ಕಿವಿಮಾತು ಹೇಳಿತು.

ಇದನ್ನೂ ಓದಿ :ಕೋವಿಡ್ ನಿರ್ವಹಣೆಗೆ ಎನ್. ಮಂಜುನಾಥ್ ಪ್ರಸಾದ್ ನಿಯೋಜಿಸಿ ಸರ್ಕಾರದ ಆದೇಶ

ಮನವಿ ಸಲ್ಲಿಸಲು ಸೂಚನೆ:
ಈಗಾಗಲೇ ನೌಕರರು ಮುಷ್ಕರ ಹಿಂಪಡೆದಿದ್ದಾರೆ, ಕೆಲ ನೌಕರರ ವಿರುದ್ಧ ಹೊರಡಿಸಲಾಗಿರುವ ವಜಾ, ಅಮಾನತು ಮತ್ತು ವರ್ಗಾವಣೆ ಆದೇಶಗಳನ್ನು ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ಸರ್ಕಾರ ಹಾಗೂ ಸಾರಿಗೆ ನಿಗಮಗಳು ತಿಳಿಸಿವೆ. ಆದ್ದರಿಂದ, ಸಾರಿಗೆ ನೌಕರರ ಕೂಟ ಅಮಾನತುಗೊಂಡಿರುವ ಎಲ್ಲ ನೌಕರರ ಸಂರ್ಪೂಣ ವಿವರ ಒಳಗೊಂಡಂತೆ ಸಾಮಾನ್ಯ ಮನವಿಯೊಂದನ್ನು ಸಿದ್ಧಪಡಿಸಿ ಎಲ್ಲ 4 ಸಾರಿಗೆ ನಿಗಮಗಳ ಕಚೇರಿಗೆ ಸಲ್ಲಿಸಬೇಕು.

Advertisement

ನಿಗಮಗಳು ಆ ಮನವಿಗಳನ್ನು ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರಕ್ಕೆ ರವಾನಿಸಬೇಕು. ಮನವಿ ಸ್ವೀಕರಿಸಿದ 2 ವಾರಗಳಲ್ಲಿ ಮೇಲ್ಮನವಿ ಪ್ರಾಧಿಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next