ಬೆಂಗಳೂರು: ಪತ್ನಿ ವಿದ್ಯಾವಂತಳು ಎಂಬ ಕಾರಣಕ್ಕೆ ಆಕೆಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕೌಟುಂಬಿಕ ನ್ಯಾಯಾಲಯ ಪತ್ನಿಗೆ 5 ಸಾವಿರ ರೂ. ಜೀವನಾಂಶ ಕೊಡುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಆರ್.ಡಿ ರಾಜೀವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
“ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು, ವಿದ್ಯಾರ್ಹತೆ ಇದ್ದ ಮಾತ್ರಕ್ಕೆ ಆಕೆ ಜೀವನಾಂಶದಿಂದ ವಂಚಿತಳಾಗುವಂತಿಲ್ಲ. ನಿರಾಕರಿಸುವಂತಿಲ್ಲ’. “”ವಿದ್ಯಾವಂತ ಪತಿ, ತನ್ನ ಪತ್ನಿ ವಿದ್ಯಾವಂತೆ ಯಾಗಿದ್ದರೂ ಸಹ ಯಾವುದೇ ಕಾರಣಕ್ಕೂ ಜೀವನಾಂಶ ನಿರಾಕರಿಸುವಂತಿಲ್ಲ. ಏಕೆಂದರೆ ವಿದ್ಯಾರ್ಹತೆ ಇದ್ದವರಿಗೆಲ್ಲಾ ಉದ್ಯೋಗ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಹಾಗಾಗಿ ಪತಿ ಪತ್ನಿಗೆ ಜೀವನಾಂಶ ನೀಡಬೇಕು”ಎಂದು ಹೇಳಿದೆ.
ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ
ಅದರಂತೆ, ಪತ್ನಿಗೆ ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಪೀಠ ಪತ್ನಿಗೆ ಮಾಸಿಕ 3 ಸಾವಿರ ಜೀವನಾಂಶ ನೀಡಲು ಪತಿಗೆ ಆದೇಶಿಸಿತು. ಈ ಪ್ರಕರಣದಲ್ಲಿ ಪ್ರತಿವಾದಿ (ಪತ್ನಿ) ಎಂ.ಎ. ಎಂಎಡ್ ಮಾಡಿದ್ದರೂ ಸಹ ಆಕೆಗೆ ಯಾವುದೇ ಉದ್ಯೋಗವಿಲ್ಲ, ಅದನ್ನು ಆಕೆ ಸ್ವತಃ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.
ಹಾಗಾಗಿ ಪತಿ ಆಕೆ ವಿದ್ಯಾವಂತೆ, ಆಕೆಗೆ ಕೆಲಸ ಸಿಗುತ್ತದೆ. ಹಾಗಾಗಿ ಆಕೆಗೆ ಜೀವನಾಂಶ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಲಾಗದು ಎಂದು ನ್ಯಾಯಪೀಠ ಹೇಳಿದೆ.