Advertisement

ಅಧಿಕಾರಿಗಳನ್ನು ಜೈಲಿಗೆ ಕಳಿಸಿ “ಜ್ಞಾನೋದಯ’ಮಾಡಿಸಬೇಕು: ಹೈಕೋರ್ಟ್‌ ಚಾಟಿ

12:03 AM Jun 11, 2022 | Team Udayavani |

ಬೆಂಗಳೂರು: ಕೋರ್ಟ್‌ ಆದೇಶಗಳನ್ನು ಹಗುರವಾಗಿ ಕಾಣುವ ಅಧಿಕಾರಿಗಳನ್ನು ಜೈಲಿಗೆ ಕಳಿಸಿ “ಜ್ಞಾನೋದಯ’ ಮಾಡಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ತೀಕ್ಷ್ಣ ಮಾತುಗಳಲ್ಲಿ ಹೇಳಿದೆ.

Advertisement

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಂದಾಯ ದಾಖಲೆಗಳಲ್ಲಿ ಜಮೀನು ಖರೀದಿದಾರರ ಹೆಸರು ಬದಲಿಸಿ ಬೇರೊಬ್ಬರ ಹೆಸರು ಸೇರಿಸಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕೆಜಿಎಫ್ ತಹಿಶೀಲ್ದಾರ್‌ ಅವರ ಪ್ರಕರಣದಲ್ಲಿ ಹೈಕೋರ್ಟ್‌ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಈ ವಿಚಾರವಾಗಿ ಸಲ್ಲಿಸಲಾಗಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ಕೆಜಿಎಫ್ ತಹಿಶೀಲ್ದಾರ್‌ ಸುಜಾತಾರಾಮ್‌ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ತಹಶೀಲ್ದಾರರ ಕ್ರಮ ಸಮರ್ಥಿಸಿಕೊಳ್ಳಲು ಮುಂದಾದರು. ಇದರಿಂದ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್‌ ತಡೆಯಾಜ್ಞೆ ಇದ್ದರೂ, ತಹಿಶೀಲ್ದಾರ ಕಂದಾಯ ದಾಖಲೆಗಳನ್ನು ತಿದ್ದಿದ್ದು ಹೇಗೆ? ಇದು ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ. ಕೋರ್ಟ್‌ ಆದೇಶಗಳ ಬಗ್ಗೆ ಅಧಿಕಾರಿಗಳಲ್ಲಿ ಇಷ್ಟೊಂದು ಅಸಡ್ಡೆ ಕರ್ನಾಟಕದಲ್ಲೇ ನೋಡಿದ್ದು.

ನ್ಯಾಯಾಲಯದ ಘನತೆ ಬಗ್ಗೆ ಅಧಿಕಾರಿಗಳಲ್ಲಿ ಕಿಂಚಿತ್ತೂ ಪರಿಜ್ಞಾನ ಇಲ್ಲ. ಕೋರ್ಟ್‌ ಘನತೆ ಏನು? ಕೋರ್ಟ್‌ ಆದೇಶ ಏನು? ಅಧಿಕಾರಿಗಳ ಕರ್ತವ್ಯ ಏನು? ನ್ಯಾಯಾಂಗ ನಿಂದನೆ ಅಂದರನೇನು? ಹೈಕೋರ್ಟ್‌ನ ಪರಮಾಧಿಕಾರ ಏನು ಅನ್ನೋದನ್ನು ಅಧಿಕಾರಿಗಳನ್ನು ಜೈಲಿಗೆ ಕಳಿಸಿ ಜ್ಞಾನೋದಯ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

Advertisement

ಇದನ್ನೂ ಓದಿ:ಮಳಲಿ ಮಸೀದಿ ವಿವಾದ: ವಿಚಾರಣೆ ಮತ್ತೆ ಮುಂಡೂಡಿಕೆ

ಬೇಷರ್‌ ಕ್ಷಮೆ ಕೇಳಿದ ತಹಶೀಲ್ದಾರ್‌:
ಮುಖ್ಯ ನ್ಯಾಯಮೂರ್ತಿಗಳು ಪೊಲೀಸರನ್ನು ಕರೆಸಿ ತಹಶೀಲ್ದಾರ್‌ ಅವರನ್ನು ಜೈಲಿಗೆ ಕಳಿಸುವ ಎಚ್ಚರಿಕೆ ನೀಡಿದರು. ಈ ವೇಳೆ ತಹಶೀಲ್ದಾರ್‌ ಬೇಷರತ್‌ ಕ್ಷಮೆಯಾಚಿಸಿದರು. ಕಂದಾಯ ದಾಖಲೆಗಳಲ್ಲಿ ಆಗಿರುವ ತಪ್ಪನ್ನು 24 ಗಂಟೆಗಳಲ್ಲಿ ಸರಿಪಡಿಸಲಾಗುವುದು ಕೊನೆಯ ಅವಕಾಶ ನೀಡಿ ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದರು.

ತಪ್ಪು ಸರಿಪಡಿಸಲು ಕೊನೆಯ ಅವಕಾಶ ನೀಡಲಾಗುವುದು. ಆಗಿರುವ ತಪ್ಪು ಸರಿಪಡಿಸಿ ಇಲ್ಲವಾದರೆ ಜೈಲಿಗೆ ಹೋಗಲು ಸಿದ್ಧರಾಗಿ. ಸೋಮವಾರ ಮತ್ತೇ ಅರ್ಜಿ ವಿಚಾರಣೆ ನಡೆಸಲಾಗುವುದು. ತಹಶೀಲ್ದಾರ್‌ ಆ ದಿನ ಖುದ್ದು ಹಾಜರಿರಬೇಕು. ತಹಶೀಲ್ದಾರ್‌ ಕ್ರಮ ಸಮಧಾನ ತರದಿದ್ದಿದ್ದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next