ಬೆಂಗಳೂರು: ಬ್ಯಾಂಕ್ ಖಾತೆ ದುರ್ಬಳಕೆ ಆರೋಪ ಸಂಬಂಧ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಬಾಲಾಜಿ ಮತ್ತು ಮಾವ ಎಂ.ಕೆ.ಪೂತರಾಜು ವಿರುದ್ಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ಚೈತ್ರಾ ದಾಖಲಿಸಿರುವ ದೂರು ಹಾಗೂ ಅದಕ್ಕೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಬಾಲಾಜಿ ಮತ್ತು ಅವರ ತಂದೆ ಎಂ.ಕೆ.ಪೂತರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೇಮಂತಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನಟಿ ಚೈತ್ರಾ ಅವರ ದೂರು ಆಧರಿಸಿ ನಗರದ ವೈಟ್‌ಫೀಲ್ಡ್ ಠಾಣಾ ಪೊಲೀಸರು ಬಾಲಾಜಿ ಮತ್ತು ಪೋತರಾಜು ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ದೂರಿಗೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಶ್ಯಾಮ್ ಸುಂದರ್ ವಾದ ಮಂಡಿಸಿ, ನಟಿ ಚೈತ್ರಾ ಮತ್ತು ಬಾಲಾಜಿ 2016ರಲ್ಲಿ ಮದುವೆಯಾಗಿದ್ದರು. ಬಾಲಾಜಿ ವಿರುದ್ಧ ಚೈತ್ರಾ 2018ರಲ್ಲಿ ಮೊದಲ ಬಾರಿಗೆ ದೂರು ದಾಖಲಿಸಿದ್ದರು. ಬಳಿಕ ದಂಪತಿ ಒಂದಾಗಿ ಜೀವನ ನಡೆಸಿದ್ದರು. ಆದರೆ, ಪತ್ನಿಯ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ತಿಳಿಸಿ 2021ರ ಮಾರ್ಚ್‌ನಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಬಾಲಾಜಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕಾರವಾಗಿ ಚೈತ್ರಾ 2021ಸೆಪ್ಟೆಂಬರ್‌ನಲ್ಲಿ ಬಾಲಾಜಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಸಂಬಂಧ ದೂರು ನೀಡಿದ್ದರು. ಅದರಲ್ಲೂ ಸಹ ಬಾಲಾಜಿ ಮೇಲೆ ಬ್ಯಾಂಕ್ ಖಾತೆಯ ದುರ್ಬಳಕೆ ಆರೋಪ ಹೊರಿಸಿದ್ದರು ಎಂದು ವಿವರಿಸಿದರು.
ಅಲ್ಲದೆ, ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಮಧ್ಯೆ ಒಂದು ವಾರದ ಹಿಂದೆ ವೈಟ್‌ಫೀಲ್ಡ್ ಠಾಣೆಗೆ ತೆರೆಳಿದ್ದ ಚೈತ್ರಾ, ತನ್ನ ಬ್ಯಾಂಕ್ ಖಾತೆಯಲ್ಲಿದ್ದ 14 ಲಕ್ಷ ರು.ವನ್ನು ಬಾಲಾಜಿ ಮತ್ತವರ ತಂದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಒಂದೇ ಆರೋಪ ಸಂಬಂಧ ಎರಡು ದೂರು ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ವಿಚ್ಛೇದನ ಅರ್ಜಿ ಸಲ್ಲಿಸಿರುವುದಕ್ಕಾಗಿ ಪ್ರತಿಯಾಗಿ ಚೈತ್ರಾ ಸುಳ್ಳು ದೂರು ದಾಖಲಿಸಿರುವ ಕಾರಣ ಅರ್ಜಿದಾರರ ವಿರುದ್ಧ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದರು