Advertisement

ದೂರ ಶಿಕ್ಷಣ: ಕುಲಪತಿ ನಿರ್ಣಯ ಎತ್ತಿ ಹಿಡಿದ ಹೈಕೋರ್ಟ್‌

08:48 PM Jun 03, 2022 | Team Udayavani |

ಬೆಂಗಳೂರು: ಕೋವಿಡ್‌-19 ಕಾರಣಕ್ಕೆ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರದ 2019-20ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಿ ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೋವಿಡ್‌ ಕಾರಣಕ್ಕಾಗಿ ಪರೀಕ್ಷೆ ನಡೆಸದೆಯೇ ಉತ್ತೀರ್ಣಗೊಳಿಸಲು ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಬೇಕಿತ್ತು. ವಿದ್ಯಾರ್ಥಿಗಳು ಈಗಾಗಲೇ ಮುಂದಿನ ತರಗತಿಗಳಿಗೆ ಶುಲ್ಕ ಪಾವತಿ ಮಾಡಿ ಪ್ರವೇಶ ಪಡೆದಿದ್ದಾರೆ. ಆದ್ದರಿಂದ, ಈ ಹಂತದಲ್ಲಿ ಸಿಂಡಿಕೇಟ್‌ ನಿರ್ಣಯವನ್ನು ಮಾನ್ಯ ಮಾಡಲು ಆಗದು’ ಎಂದು ಅಭಿಪ್ರಾಯಪಟ್ಟಿದೆ.

ಕೋವಿಡ್‌ ಕಾರಣಕ್ಕಾಗಿ ದೂರ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮಿಸ್ಟರ್‌ ಅಥವಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಹಾಗೂ ಆಂತರಿಕ ಅಂಕಗಳ ಆಧಾರದಲ್ಲಿ ಉತ್ತೀರ್ಣಗೊಳಿಸಬೇಕು ಎಂದು ಧನ ಸಹಾಯ ಆಯೋಗ (ಯುಜಿಸಿ) ನೀಡಿದ್ದ ಮಾರ್ಗಸೂಚಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲಾಗಿತ್ತು. ಇದರನ್ವಯ ಕುವೆಂಪು ವಿಶ್ವವಿದ್ಯಾಲಯ 2019-20ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆಯೇ ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿತ್ತು.

ಈ ಮಧ್ಯೆ ಕುವೆಂಪು ವಿವಿ ಸಿಂಡಿಕೇಟ್‌ 2022ರ ಫೆಬ್ರುವರಿ 8ರಂದು ಸಭೆ ಸೇರಿ ಕುಲಪತಿಗಳ ಆದೇಶಕ್ಕೆ ತಕರಾರು ತೆಗೆದಿತ್ತು. ಈ ಆದೇಶವನ್ನು ರದ್ದುಪಡಿಸಲು ನಿರ್ಧರಿಸಿತು ಮತ್ತು ಯಾರೆಲ್ಲಾ ದೂರ ಶಿಕ್ಷಣ ಕೇಂದ್ರದಲ್ಲಿ ಮುಂದಿನ ತರಗತಿಗಳಿಗೆ ಪರೀಕ್ಷೆ ಬರೆಯದೆಯೇ ಉತ್ತೀರ್ಣರಾಗಿದ್ದಾರೊ ಅವರೆಲ್ಲಾ ಪರೀಕ್ಷೆ ಬರೆಯಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next