ಬೆಂಗಳೂರು: ಸರ್ಕಾರದ ನಿಗಮ-ಮಂಡಳಿಗಳು ಮತ್ತು ಪ್ರಾಧಿಕಾರಗಳ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು “ಸಮತಲ’ ಮೀಸಲಾತಿ ಕಲ್ಪಿಸುವ ವಿಚಾರಗಳಿಗೆ ಸೂಚನೆಗಳನ್ನು ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ಎರಡು ವಾರ ಕಾಲಾಕವಾಶ ನೀಡಿದೆ.
ಈ ಕುರಿತು “ಸಂಗಮ’ ಹಾಗೂ “ಜೀವಾ’ ಸ್ವಯಂ ಸೇವಾ ಸಂಸ್ಥೆ ಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮಐರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿದ್ದವು.
ವಿಚಾರಣೆ ವೇಳೆ ಜೀವಾ ಸಂಸ್ಥೆ ಪರ ಹಿರಿಯ ವಕೀಲೆ ಜೈನಾ ಕೊಠಾರಿ, ಸರ್ಕಾರದ ಎಲ್ಲ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲಾ ವರ್ಗಗಳಲ್ಲಿ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಲು ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿ 2021ರ ಜುಲೈ 6ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅಲ್ಲದೆ, ಸರ್ಕಾರದ ತಿದ್ದುಪಡಿ ನಿಯಮವು ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಸರ್ಕಾರದ ಇತರೆ ಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಈ ತಿದ್ದುಪಡಿ ನಿಯಮವನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕೆಂಬದು ನಮ್ಮ ಮನವಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರಾಧಿಕಾರ, ನಿಗಮ-ಮಂಡಳಿಗಳಿಗೆ ಸಲಹೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೆ.22ರಂದು ನಾಲ್ಕು ವಾರ ಕಾಲಾವಶ ನೀಡಿತ್ತು. ಸರ್ಕಾರ ಈ ಸಂಬಂಧ ಉತ್ತರಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಹಿಂದಿ ವಿರೋಧಿಸುವವರು, ಉರ್ದು ಬರೆದರೆ ಪ್ರಶ್ನಿಸಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಸರ್ಕಾರಿ ವಕೀಲರು ಹಾಜರಾಗಿ, ನ್ಯಾಯಾಲಯದ ಆದೇಶ ಪಾಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಆ ಮನವಿಗೆ ಒಪ್ಪಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ, 2021ರ ಸೆ.22ರಂದು ನ್ಯಾಯಾಲಯ ನೀಡಿದ ಆದೇಶ ಪಾಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.