Advertisement

ಶಿಕ್ಷಣದಲ್ಲಿ ರಾಜಕೀಯ ಏಕೆ ತರುತ್ತೀರಿ : ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

08:12 PM Nov 11, 2021 | Team Udayavani |

ಬೆಂಗಳೂರು : “ಶಿಕ್ಷಣದಲ್ಲಿ ರಾಜಕೀಯ ಏಕೆ ಸೇರಿಸುತ್ತೀರಿ’ ಎಂದು ಸರ್ಕಾರಕ್ಕೆ ಖಾರವಾಗಿ ಪ್ರಶ್ನಿಸಿರುವ ಹೈಕೋರ್ಟ್‌, ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಲು ರಾಷ್ಟ್ರೀಯ ನೀತಿಯಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ಉತ್ತರ ನೀಡಲು ಸೂಚಿಸಿದೆ.

Advertisement

ರಾಜ್ಯದಲ್ಲಿ ಪದವಿ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಹಯಗ್ರೀವ ಟ್ರಸ್ಟ್‌ ಹಾಗೂ ವ್ಯೋಮ ಲಿಂಗ್ವಿಸ್ಟಿಕ್‌ ಲ್ಯಾಬ್‌ ಫೌಂಡೇಷನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, , ರಾಜ್ಯ ಸರ್ಕಾರವು ತನ್ನ ನೀತಿಯನ್ನು ಸಮರ್ಥಿಸಿಕೊಂಡು ಆಕ್ಷೇಪಣೆ ಸಲ್ಲಿಸಿದೆ. ಭಾಷಾ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರೋತ್ಸಾಹಿಸುತ್ತದೆ. ಈ ಕುರಿತು ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡಿಸಬೇಕಿದ್ದು, ಸೋಮವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ಸೋಮವಾರ ಏತಕ್ಕೆ, ಇಂದೇ ವಾದ ಮಂಡಿಸಬಹುದಲ್ಲವೇ? ಸರ್ಕಾರದ ನಿರ್ಧಾರ ಮರುಪರಿಶೀಲಿಸುವ ಬಗ್ಗೆ ಮಾಹಿತಿ ನೀಡುವಂತೆ ಹಿಂದಿನ ವಿಚಾರಣೆ ವೇಳೆಯೇ ಅಡ್ವೋಕೇಟ್‌ ಜನರಲ್‌ ಅವರಿಗೆ ಹೇಳಲಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಅವರು ಹೇಳಿದ್ದರು. ಆ ವಿಚಾರ ಏನಾಯಿತು. ಆದೇಶ ಮರುಪರಿಶೀಲಿಸುವ ಬಗ್ಗೆ ಸರ್ಕಾರದ ನಿಲುವು ಏನು? ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಲು ರಾಷ್ಟ್ರೀಯ ನೀತಿಯಲ್ಲಿ ಅವಕಾಶವಿದೆಯೇ? ಇದ್ದರೆ ದಾಖಲೆಗಳನ್ನು ಕೊಡಿ? ಭಾಷೆ ಕಲಿಕೆಯನ್ನು ಉತ್ತೇಜಿಸಬಹುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆಯೇ ಹೊರತು, ಕಡ್ಡಾಯಗೊಳಿಸಬಹುದು ಎಂದು ಹೇಳಿಲ್ಲ. ಹೀಗಿದ್ದಾಗ “ಶಿಕ್ಷಣದಲ್ಲಿ ರಾಜಕೀಯ ಏಕೆ ಸೇರಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.

ಇದನ್ನೂ ಓದಿ : ಮುಂಬಯಿ : 6 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಹಿತ ನೈಜೀರಿಯನ್ ಪ್ರಜೆಯ ಬಂಧನ

Advertisement

ಸರ್ಕಾರದ ಸಮರ್ಥನೆ:
ಉನ್ನತ ಶಿಕ್ಷಣದಲ್ಲಿ ಕೇವಲ ಆರು ತಿಂಗಳ ಕಾಲ ಬೇಸಿಕ್‌ ಕನ್ನಡ ಕಲಿಸಲಾಗುವುದು. ಈಗಾಗಲೇ ಪಠ್ಯ ಪುಸ್ತಕ ಪೂರೈಲಾಗಿದೆ. ಸಣ್ಣ ಸಣ್ಣ ಕನ್ನಡದ ಪದಗಳು ಕಲಿಯಲು ಹೇಳಿಕೊಡಲಾಗುತ್ತದೆಯಷ್ಟೇ. ಅದೂ ಆರು ತಿಂಗಳ ಕಾಲ. ಮೊದಲನೇ ತರಗತಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪಠ್ಯ ಬೋಧಿಸಲಾಗುತ್ತದೆ. ಇದು ಕೇವಲ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನವಾಗಿದೆ. ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಚರ್ಚಿಸಲು ಅನುಕೂಲವಾಗಷ್ಟು ಕನ್ನಡ ಕಲಿಸಲಾಗುತ್ತದೆ. ಈ ಕ್ರಮವನ್ನು ಉಷಾ ಮೆಹ್ತಾ ಪ್ರಕರಣದಲ್ಲಿ ಸುಪ್ರೀಂ ಕೊರ್ಟ್‌ ಸಹ ಅನುಮೋದಿಸಿದೆ ಎಂದು ಸರ್ಕಾರದ ಪರ ವಕೀಲರು ಸಮರ್ಥಿಸಿಕೊಂಡರು.

ಅಲ್ಲದೆ, ಇದೇ ಮೊದಲ ಬಾರಿಗೆ ಈ ವಿಧಾನ ಪರಿಚಯಿಸುತ್ತಿಲ್ಲ. ಕಳೆದ 10 ವರ್ಷಗಳಿಂದ ಎಂಜಿನಿಯರ್‌ ವ್ಯಾಸಂಗದಲ್ಲಿ ಕನ್ನಡ ಕಲಿಯುವ ವಿಧಾನ ಪರಿಚಯಿಸಲಾಗಿದೆ. ಇದು 10ನೇ ತರಗತಿ ನಂತರ ಕನ್ನಡ ವಿಷಯವನ್ನು ವ್ಯಾಸಂಗ ಮಾಡದವರಿಗೆ ಕನ್ನಡ ಕಲಿಯಲು ಅನುಕೂಲವಾಗಿದೆ. ಈ ವಿಧಾನ ಯಶಸ್ವಿ ಸಹ ಆಗಿದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ. ತನಗೆ ಇಷ್ಟಬಂದ ಯಾವುದೇ ವಿಷಯ ಅಥವಾ ಕೋರ್ಸ್‌ ಅನ್ನು ಅಧ್ಯಯನ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗೆ ನೀಡಲಾಗಿದೆ ಎಂದರು.

ಅಡ್ವೋಕೇಟ್‌ ಜನರಲ್‌ ಅವರು ವಾದ ಮಂಡಿಸಲಿದ್ದಾರೆ ಎಂಬ ಸರ್ಕಾರದ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next