ಮಡಿಕೇರಿ/ಕೊಡಗು: ಧಾರಕಾರ ಮಳೆ, ಗಾಳಿಗೆ ಮಂಜಿನ ನಗರಿ ಮಡಿಕೇರಿ, ಕೊಡಗು, ಕುಶಾಲನಗರ ತತ್ತರಿಸಿ ಹೋಗಿದ್ದು ಬೆಳೆಗಳೆಲ್ಲಾ ನಾಶನಾಗಿದೆ. ಪ್ರವಾಹ ಸಂತ್ರಸ್ತರು ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಮತ್ತೊಂದೆಡೆ ಸೂರು ಇಲ್ಲದೆ, ಊಟ, ನೀರು ಇಲ್ಲದೆ ಜನರು ಕಣ್ಣೀರು ಇಡುವಂತಾಗಿದೆ.
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಲ್ಲದೇ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದ್ದು ನೂರಾರು ಮನೆಗಳು ಕುಸಿದು ಬಿದ್ದಿದೆ. ಹಲವರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ವಿದ್ಯುತ್ ಇಲ್ಲ, ಮೊಬೈಲ್ ನೆಟ್ ವರ್ಕ್ ಇಲ್ಲ. ಪ್ರವಾಹ ಪರಿಸ್ಥಿತಿ, ಊಟಕ್ಕೂ ತತ್ವಾರ ಹೀಗೆ ಮಡಿಕೇರಿ ಜನರ ಜನಜೀವನ ಅಸ್ತವ್ಯಸ್ತಗೊಂಡು ಪರದಾಡುವಂತಾಗಿದೆ.
ಮಡಿಕೇರಿಯಲ್ಲಿನ ವರುಣ ರೌದ್ರಾವತಾರಕ್ಕೆ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ರಕ್ಷಣಾ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಸಿಬ್ಬಂದಿ, ಹೆಲಿಕಾಪ್ಟರ್, ದೋಣಿಗಳ ಸಹಾಯ ಬೇಕಾಗಿದೆ. ಆದರೆ ಜನರ ರಕ್ಷಣೆಗೆ ತುಂಬಾ ತೊಡಕಾಗಿ ಪರಿಣಮಿಸಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ದೂರಿದ್ದಾರೆ.
ಪ್ರವಾಹ ಪರಿಸ್ಥಿತಿಯಿಂದಾಗಿ ತಾವರೆಕೆರೆ-ಕುಶಾಲನಗರ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಾರಂಗಿ ಡ್ಯಾಮ್ ರಸ್ತೆ ಮೂಲಕ ಲಘುವಾಹನಗಳ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೊದಲು ನಮ್ಮ ಜನರನ್ನು ರಕ್ಷಿಸಿ:
ಜನ ಗುಡ್ಡಗಾಡು ಪ್ರದೇಶದಲ್ಲಿ ಸಾಯುತ್ತಿದ್ದಾರೆ..ಹೆಲಿಕಾಪ್ಟರ್ ಬರುತ್ತಿದೆ ಎಂದು ಹೇಳುತ್ತಿದ್ದೀರಿ..ಎಲ್ಲಿದೆ ಹೆಲಿಕಾಪ್ಟರ್. ಮೊದಲು ನಮ್ಮ ಜನರನ್ನು ರಕ್ಷಿಸಿ. ಸಭೆ ನಂತರ ನಡೆಸಿ ಎಂದು ಎಂಎಲ್ ಸಿ ವೀಣಾ ಮಡಿಕೇರಿಯ ಡಿಸಿ ಕಚೇರಿಗೆ ಬಂದು ಅಸಮಾಧಾನ ವ್ಯಕ್ತಪಡಿಸಿದ ಪರಿ ಇದು.