Advertisement

ವಿಶ್ವಾಸದಾಟಕ್ಕೆ ಕಡೆಗೂ ಮಂಗಳ

09:16 AM Jul 25, 2019 | Team Udayavani |

ಹದಿನಾಲ್ಕು ತಿಂಗಳುಗಳ ಹಿಂದೆ ರಚನೆಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಬಹುಮತ ಸಾಬೀತು ಪಡಿಸಲಾಗದೆ ಬಿದ್ದು ಹೋಗಿದೆ. ಅಧಿಕಾರ ಸ್ವೀಕರಿಸಿದಂದಿನಿಂದಲೂ ಒಂದಲ್ಲ ಒಂದು ವಿವಾದಗಳಿಗೆ ಸಿಲುಕುತ್ತಲೇ ಇದ್ದ ಈ ಸರಕಾರ ಅಂತಿಮವಾಗಿ ಶಾಸಕರ ಅತೃಪ್ತಿಯಿಂದಲೇ ಪತನಗೊಂಡಿದೆ. ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅತ್ತ ಬಿಜೆಪಿ ಸರಕಾರ ರಚನೆಯ ಸಿದ್ಧತೆ ಶುರು ಮಾಡಿದ್ದು, ಒಂದೆರಡು ದಿನಗಳಲ್ಲಿ ಹೊಸ ಸರಕಾರ ಬರುವ ಸಾಧ್ಯತೆ ಇದೆ.

Advertisement

204 ಸದನದಲ್ಲಿ ಹಾಜರಿದ್ದವರು
99 ಜೆಡಿಎಸ್‌ ಕಾಂಗ್ರೆಸ್‌ಮೈತ್ರಿ
105 ಬಿಜೆಪಿ
20 ಗೈರು ಹಾಜರಿ

ಬೆಂಗಳೂರು: ಅಂತೂ ಇಂತೂ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಆಟಕ್ಕೆ ತಾರ್ಕಿಕ ಅಂತ್ಯ ಬಿದ್ದಿದ್ದು, ಎಚ್‌.ಡಿ. ಕುಮಾರ ಸ್ವಾಮಿ ಅವರ ಸಮ್ಮಿಶ್ರ ಸರಕಾರ ವಿಶ್ವಾಸಮತ ಯಾಚನೆ ಸಂದರ್ಭ ಬಹುಮತ ಸಾಬೀತು ಮಾಡಲಾಗದೆ ಮಹಾಕುಸಿತ ಕಂಡಿದೆ. ಅಲ್ಲಿಗೆ ಕುಮಾರಸ್ವಾಮಿ ಅವರ ಈ ಸರಕಾರದ ಆಯುಸ್ಸು ಕೇವಲ 14 ತಿಂಗಳಿನಲ್ಲಿ ಮುಗಿದಿದೆ. ಅತ್ತ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದು ಸರಕಾರ ರಚನೆಗೆ ಸಿದ್ಧತೆಗಳು ಶುರುವಾಗಿವೆ.

ವಿಧಾನಸಭೆಯಲ್ಲಿ ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತದ ಪರ 99 ಮತ್ತು ವಿರುದ್ಧ 105 ಮತಗಳು ಬಿದ್ದವು. ಮತಕ್ಕೆ ಹಾಕುವಾಗ ಸದನದಲ್ಲಿ ಇದ್ದವರ ಸಂಖ್ಯೆ 204. ಸರಳ ಬಹುಮತಕ್ಕೆ ಬೇಕಾಗಿದ್ದುದು 103. ಆದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಸದಸ್ಯರ ಸಂಖ್ಯೆ ಕೇವಲ 99ಕ್ಕೆ ಇಳಿದು, ವಿಪಕ್ಷದವರ ಸಂಖ್ಯೆ 105 ಇದ್ದುದರಿಂದ ವಿಶ್ವಾಸಮತಕ್ಕೆ ಸೋಲಾಗಿ, ಸರಕಾರವೂ ಬಿದ್ದು ಹೋಯಿತು. ವಿಧಾನಸಭೆಯಿಂದ ರಾಜ ಭವನಕ್ಕೆ ತೆರಳಿದ ಎಚ್‌.ಡಿ. ಕುಮಾರಸ್ವಾಮಿ ಅವರು, ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಮುಂದಿನ ಸಿಎಂ ನೇಮಕವಾಗುವವರೆಗೂ ಕುಮಾರಸ್ವಾಮಿ ಅವರೇ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ.

ನಾಲ್ಕನೇ ಬಾರಿಗೆ ಬಿಎಸ್‌ವೈ ಸಿಎಂ
ಅತ್ತ ಕುಮಾರಸ್ವಾಮಿ ರಾಜೀನಾಮೆ ನೀಡುತ್ತಿದ್ದಂತೆ, ಬಿಜೆಪಿಯ ಅಧಿಕಾರ ರಚಿಸುವ ಹಾದಿ ಸುಗಮವಾಗಿದೆ. ಬಿ.ಎಸ್‌.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ಅಲ್ಲಿ ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಅನಂತರ ರಾಜ್ಯ ಪಾಲರಲ್ಲಿ ಸರಕಾರ ರಚನೆಯ ಹಕ್ಕು ಮಂಡಿಸಲು ನಿರ್ಧರಿಸಲಾಗಿದೆ.

Advertisement

ನಾಳೆ ಅಥವಾ ನಾಡಿದ್ದು ಪ್ರಮಾಣ
ಶಾಸಕಾಂಗ ಸಭೆ ಮತ್ತು ರಾಜ್ಯಪಾಲರ ಭೇಟಿ ಪ್ರಕ್ರಿಯೆ ಮುಗಿದ ಅನಂತರ, ಗುರುವಾರ ಅಥವಾ ಶುಕ್ರವಾರ ಬಿ.ಎಸ್‌.ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರ ಅಥವಾ ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ನಿರೀಕ್ಷೆ ಇದೆ.

ಏನೇನಾಯಿತು?
ಸೋಮವಾರ ರಾತ್ರಿ ಸ್ಪೀಕರ್‌ ಹೇಳಿದಂತೆ ಬೆಳಗ್ಗೆ 10 ಗಂಟೆಗೆ ಸದನ ಶುರುವಾದರೂ ಆಡಳಿತ ಪಕ್ಷದ ಕಡೆಯಿಂದ ಬಹುತೇಕ ಶಾಸಕರು ಬರಲೇ ಇಲ್ಲ. ಆರಂಭದಲ್ಲಿ ದೋಸ್ತಿ ಸರಕಾರದ 6 ಮಂದಿಯಷ್ಟೇ ಸದನದಲ್ಲಿದ್ದರು. ಆದರೆ ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತು ಬಿಜೆಪಿಯ ಬಹುತೇಕ ಎಲ್ಲ ಶಾಸಕರು ಸದನಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದರು. ಈ ವಿಚಾರವಾಗಿಯೂ ಕೆಲವು ಕಾಲ ಗದ್ದಲವೂ ನಡೆಯಿತು.

ಸಚಿವರಾದ ಯು.ಟಿ.ಖಾದರ್‌, ಡಿ.ಕೆ.ಶಿವಕುಮಾರ್‌, ಸಾ.ರಾ.ಮಹೇಶ್‌ ಅವರು ವಿಶ್ವಾಸಮತ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಆಪರೇಷನ್‌ ಕಮಲ ಮೂಲಕ ಬಿಜೆಪಿಯು ಸರಕಾರ ಪತನಕ್ಕೆ ಸಂಚು ರೂಪಿಸಿದೆ. ಮುಂಬಯಿಗೆ ತೆರಳಿರುವ ಶಾಸಕರಿಗೆ ಬಿಜೆಪಿಯದೇ ಕುಮ್ಮಕ್ಕು ಇದೆ ಎಂದು ಆರೋಪಿಸಿದರು. ಅಪರಾಹ್ನ ಭೋಜನ ವಿರಾಮಕ್ಕೂ ಸದನ ಮುಂದೂಡದೆ ರಾತ್ರಿ 7.45ರ ವರೆಗೆ ಕಲಾಪ ನಡೆಯಿತು. ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ಮುಂಬಯಿಗೆ ಹೋಗಿದ್ದು, ಶಾಸಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಬಗೆಯ ಬಗ್ಗೆ ಮಾತನಾಡಿದರು. ಅನಂತರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿದರು.

ಸಿಎಂ ವಿದಾಯಕ್ಕೆ ಮುನ್ನ
ವಿಶ್ವಾಸಮತ ಸಾಬೀತು ಕಷ್ಟವೆಂದು ಗೊತ್ತಾಗಿತ್ತೋ ಏನೋ, ಕುಮಾರಸ್ವಾಮಿ ಸದನಕ್ಕೆ ಬಂದಿದ್ದೇ ಅಪರಾಹ್ನ. ತೀರಾ ವಿದಾಯದ ಭಾಷಣಕ್ಕೆ ಸಿದ್ಧವಾಗಿಯೇ ಬಂದಿದ್ದ ಅವರು, ಇತಿಹಾಸದ ಮೆಲುಕುಗಳ ಜತೆಗೆ ಈ ಸರಕಾರದ ಅವಧಿಯಲ್ಲಾದ ಬಹುತೇಕ ವಿಚಾರಗಳನ್ನು ಪ್ರಸ್ತಾವಿಸಿದರು.

  1. ವಚನಭ್ರಷ್ಟನಲ್ಲ
    ನನಗೆ ವಚನಭ್ರಷ್ಟನೆಂದರೆ ನೋವಾಗುತ್ತದೆ. ನನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಹೋದರೂ ಒಂದಷ್ಟು ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ.

2. ಬಾಂಬ್‌ ಬೀಳುತ್ತೆ
ಯಡಿಯೂರಪ್ಪ ಈಗ ಸರಕಾರ ಮಾಡಬಹುದು. ಆದರೆ ಸಂಪುಟ ರಚನೆ ಮಾಡುತ್ತಿದ್ದಂತೆ ಬಾಂಬ್‌ ಬೀಳುತ್ತೆ ನೋಡುತ್ತಿರಿ.

3. ವಿಳಂಬಕ್ಕೆ ಕ್ಷಮೆ
ವಿಶ್ವಾಸಮತ ಯಾಚನೆಯಲ್ಲಿ ವಿಳಂಬವಾಗಿದ್ದರೆ ಸ್ಪೀಕರ್‌ ಮತ್ತು ರಾಜ್ಯದ ಜನತೆಯ ಕ್ಷಮೆ ಕೋರು ತ್ತೇನೆ. ವಿಳಂಬಕ್ಕೆ ಸ್ವಲ್ಪ ಸ್ವಾರ್ಥ, ಜತೆಗೆ ವಿಶ್ವಾಸವೂ ಇತ್ತು. ಹೋದವರು ವಾಪಸ್‌ ಬರುವ ನಿರೀಕ್ಷೆ ಇತ್ತು.

4. ಪಕ್ಷಕ್ಕೆ ಸೇರಿಸಿಕೊಳ್ಳಲ್ಲ
ಈಗ ಪಕ್ಷ ಬಿಟ್ಟು ಹೋಗಿರು ವವರನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಅವರು ಯಾರೂ ನಮಗೆ ಬೇಡ.

5. ಹಗುರ ಮಾತು ಬೇಡ
ನನ್ನ ತಪ್ಪು ನಿರ್ಧಾರಗಳಿಗೆ ಟೀಕೆ ಮಾಡಿ. ನನ್ನ ತಂದೆ ಬಗ್ಗೆ ಹಗುರವಾಗಿ ಮಾತನಾಡಬೇಡಿ, ನಿಂದಿಸಬೇಡಿ.

6. ರೈತರಿಗೆ ಮೋಸ ಮಾಡಿಲ್ಲ
ರಾಜ್ಯದ ರೈತರ ಸಾಲ ಮನ್ನಾಗೆ 23,500 ಕೋಟಿ ರೂ. ಕಾಯ್ದಿರಿಸಿ ಕ್ರಮ ಕೈಗೊಂಡಿದ್ದೇನೆ. ಕೊಡಗಿನಲ್ಲಿ ನೆರೆ ಸಂಭವಿಸಿದಾಗಲೂ ಮತ ಹಾಕಿಲ್ಲ ಎಂದು ನಿರ್ಲಕ್ಷಿಸದೆ ಎಲ್ಲ ರೀತಿಯ ನೆರವು ನೀಡುವ ಕೆಲಸ ಮಾಡಿದ್ದೇನೆ.

7. ರಾಕ್ಷಸ ಹೇಳಿಕೆ: ನೋವು
ಮೈತ್ರಿ ಸರಕಾರದಿಂದ ರಾಕ್ಷಸ ರಾಜ ಕಾರಣ ನಡೆಯುತ್ತಿದೆ ಎಂಬ ವಿಶ್ವನಾಥ್‌ ಹೇಳಿಕೆಯಿಂದ ನೋವಾಗಿದೆ.

8. 2ನೇ ಬಾರಿಗೆ ಟೋಪಿ
ಕೆ.ಗೋಪಾಲಯ್ಯ ಎರಡನೇ ಬಾರಿಗೆ ನಮಗೆ ಟೋಪಿ ಹಾಕಿದ್ದಾರೆ. ನಾನು ಎಂದೂ ವೈಯಕ್ತಿಕವಾಗಿ ಸ್ಥಾನ ದುರುಪಯೋಗ ಮಾಡಿ ಕೊಂಡಿಲ್ಲ.

9. ನಂದೇ ಕೊಠಡಿ ಇದೆ
ತಾಜ್‌ ವೆಸ್ಟ್‌ಎಂಡ್‌ನ‌ಲ್ಲಿ ನನ್ನ ಒಂದು ಕೊಠಡಿ ಇದೆ. ಅದು ಅದೃಷ್ಟದ ಕೊಠಡಿ ಎಂಬ ಕಾರಣಕ್ಕೆ ಅಲ್ಲೇ ವಾಸ್ತವ್ಯ ಮುಂದುವರಿಸಿದ್ದೆ. ಆದರೆ ಹೊಟೇಲ್‌ನಲ್ಲಿ ಕುಳಿತು ವ್ಯವಹಾರ ನಡೆಸಿಲ್ಲ. ನಾನು ಸರಕಾರಿ ವಾಹನವನ್ನೂ ಪಡೆಯದೆ ಖಾಸಗಿ ಕಾರು ಬಳಸುತ್ತಿದ್ದೇನೆ.

ಮುಂದೇನು?
ಜುಲೈ 24: ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ನಾಯಕನ ಆಯ್ಕೆ
ಜು. 25: ಸರಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡನೆ
ಜು. 25/26: ನೂತನ ಮುಖ್ಯಮಂತ್ರಿ ಯಾಗಿ ಯಡಿಯೂರಪ್ಪ ಪ್ರಮಾಣ ವಚನ.
ಜು. 27/29: ಸದನದಲ್ಲಿ ಬಹುಮತ ಸಾಬೀತು

ಅತೃಪ್ತರು ಇಂದು ವಾಪಸ್‌?
ಮುಂಬಯಿ: ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಸರಕಾರದ ಪತನಕ್ಕೆ ಕಾರಣವಾದ ಅತೃಪ್ತ ಶಾಸಕರು ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಮೊದಲೇ ಬುಧವಾರ ಬೆಂಗಳೂರಿಗೆ ವಾಪಸ್‌ ಆಗುವ ಸಾಧ್ಯತೆ ಇದೆ. ಈ ಸಂಬಂಧ ಮುಂಬಯಿಯಲ್ಲಿರುವ ಅತೃಪ್ತ ಶಾಸಕ ಎಚ್‌. ವಿಶ್ವನಾಥ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎನ್‌. ಮಹೇಶ್‌ ಅಮಾನತು
ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಶಾಸಕ ಎನ್‌. ಮಹೇಶ್‌ ಪಕ್ಷದ ಅಧ್ಯಕ್ಷೆ ಮಾಯಾವತಿ ಸೂಚನೆ ನೀಡಿದ್ದರೂ ಮೈತ್ರಿ ಸರಕಾರದ ಪರವಾಗಿ ಮತ ಚಲಾಯಿಸದೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರಿಂದ ಅವರನ್ನು ಬಿಎಸ್‌ಪಿಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

ಬಿಜೆಪಿ ಬಲ 107
ಬಿಜೆಪಿ ಬಹುಮತ ಸಾಬೀತುಪಡಿಸುವಾಗ ಸದನ ಸಂಖ್ಯಾಬಲ ಈಗಿರುವಂತೆ 204 ಇದ್ದರೆ, ಬಿಜೆಪಿಯು 105 , ಕಾಂಗ್ರೆಸ್‌-ಜೆಡಿಎಸ್‌ 99 ಬಲ ಇರಲಿದೆ. ಮಂಗಳವಾರ ಸದನಕ್ಕೆ ಗೈರು ಹಾಜರಾಗಿರುವ ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರೆ 107 ಸಂಖ್ಯಾಬಲ ಆಗುತ್ತದೆ.

ಕನಿಷ್ಠ 6 ಗೆದ್ದರೆ ಸಾಕು
ವಿಧಾನಸಭೆ ಸದಸ್ಯತ್ವಕ್ಕೆ ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರವಾದರೆ ಆಗ ಹದಿನೈದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಬಿಜೆಪಿ ಕನಿಷ್ಠ 6 ಗೆದ್ದರೆ ಮ್ಯಾಜಿಕ್‌ ಸಂಖ್ಯೆ 113 ತಲುಪಲಿದೆ. ಬಿಜೆಪಿಯು ಉಪ ಚುನಾವಣೆಯಲ್ಲಿ ಹತ್ತು ಸ್ಥಾನ ಗೆದ್ದು 117 ಸಂಖ್ಯಾಬಲ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.

ರಾಜೀನಾಮೆ ಸಲ್ಲಿಸಿ ಗೈರು ಹಾಜರಾದವರು
ರಮೇಶ್‌ ಜಾರಕಿಹೊಳಿ-ಗೋಕಾಕ
ಮಹೇಶ ಕುಮಟಳ್ಳಿ-ಅಥಣಿ
ಪ್ರತಾಪಗೌಡ ಪಾಟೀಲ್‌-ಮಸ್ಕಿ
ಬಿ.ಸಿ. ಪಾಟೀಲ್‌-ಹಿರೆಕೇರೂರು
ಶಿವರಾಮ್‌ ಹೆಬ್ಟಾರ್‌-ಯಲ್ಲಾಪುರ
ಸೋಮಶೇಖರ್‌-ಯಶವಂತಪುರ
ಮುನಿರತ್ನ-ರಾಜರಾಜೇಶ್ವರಿನಗರ
ಬೈರತಿ ಬಸವರಾಜ್‌-ಕೆ.ಆರ್‌.ಪುರ
ಡಾ| ಸುಧಾಕರ್‌-ಚಿಕ್ಕಬಳ್ಳಾಪುರ
ಎಂ.ಟಿ.ಬಿ. ನಾಗರಾಜ್‌-ಹೊಸಕೋಟೆ
ಆನಂದ್‌ ಸಿಂಗ್‌-ವಿಜಯನಗರ(ಬಳ್ಳಾರಿ)
ರೋಷನ್‌ ಬೇಗ್‌-ಶಿವಾಜಿನಗರ
ಎಚ್‌. ವಿಶ್ವನಾಥ್‌-ಹುಣಸೂರು
ನಾರಾಯಣ ಗೌಡ-ಕೆ.ಆರ್‌.ಪೇಟೆ
ಗೋಪಾಲಯ್ಯ-ಮಹಾಲಕ್ಷ್ಮೀ ಲೇಔಟ್‌

ರಾಜೀನಾಮೆ ಸಲ್ಲಿಸದೆ ಗೈರು ಹಾಜರಾದವರು
ಎನ್‌. ಮಹೇಶ್‌-ಕೊಳ್ಳೆಗಾಲ.(ಬಿಎಸ್‌ಪಿ)
ಶ್ರೀಮಂತ ಪಾಟೀಲ್‌-ಕಾಗವಾಡ (ಕಾಂಗ್ರೆಸ್‌)
ಬಿ. ನಾಗೇಂದ್ರ-ಬಳ್ಳಾರಿ ಗ್ರಾಮಾಂತರ (ಕಾಂಗ್ರೆಸ್‌)
ಎಚ್‌.ನಾಗೇಶ-ಮುಳಬಾಗಿಲು (ಪಕ್ಷೇತರ)
ಆರ್‌.ಶಂಕರ್‌-ರಾಣೆಬೆನ್ನೂರು ( ಕೆಪಿಜೆಪಿ)

ಇಂದು ವೀಕ್ಷಕರ ಆಗಮನ
ರಾಜ್ಯದಲ್ಲಿ ಬಿಜೆಪಿಗೆ ಸರಕಾರ ರಚನೆ ಅವಕಾಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಬಿಜೆಪಿಯಿಂದ ವೀಕ್ಷಕರೊಬ್ಬರು ರಾಜ್ಯಕ್ಕೆ ಆಗಮಿಸಲಿದ್ದು, ಅನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ.

ಈ ನಡುವೆ ಯಡಿಯೂರಪ್ಪ ವರಿಷ್ಠರು ಆಹ್ವಾನಿಸಿದರೆ ದಿಲ್ಲಿಗೆ ತೆರಳಿ ಚರ್ಚಿಸುವ ಸಾಧ್ಯತೆ ಇದೆ. ಮೈತ್ರಿ ಸರಕಾರ ಪತನವಾಗಿರುವ ಹಿನ್ನೆಲೆಯಲ್ಲಿ ಮುಂದೆ ಬಿಜೆಪಿ ಅನುಸರಿಸಬೇಕಾದ ನಡೆಯ ಬಗ್ಗೆ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ.

ಮಂಗಳವಾರ ಮುಖ್ಯಮಂತ್ರಿಗಳ ವಿಶ್ವಾಸ ಮತ ನಿರ್ಣಯ ಬಿದ್ದು ಹೋಗುತ್ತಿದ್ದಂತೆ ಸಂಭ್ರಮದಲ್ಲಿ ತೇಲಿದ ಬಿಜೆಪಿ ಶಾಸಕರು, ಬಳಿಕ ಯಲಹಂಕ ಬಳಿಯ ರಮಡಾ ರೆಸಾರ್ಟ್‌ಗೆ ಮರಳಿದರು.

ಪ್ರಳಯ ಆದರೂ ಸೇರಿಸಲ್ಲ
ಪಕ್ಷಕ್ಕೆ ದ್ರೋಹ ಬಗೆದು ಹೋಗಿರುವ ಶಾಸಕರನ್ನು ಪ್ರಳಯ ಆದರೂ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲೇ ಘೋಷಿಸಿದರು. ಆಗ, ಸ್ಪೀಕರ್‌ ರಮೇಶ್‌ ಕುಮಾರ್‌ ಅವರು, ನೀವು ನನಗೆ ಈಗ ದೇವರಾಜ ಅರಸು ಅವರಂತೆ ಕಾಣುತ್ತಿದ್ದೀರಿ ಎಂದು ಹೇಳಿದರು. ಕುಮಾರಸ್ವಾಮಿಯವರು ಸಹ ನಮ್ಮ ಪಕ್ಷವೂ ಹೋಗಿರುವ ಶಾಸಕರನ್ನು ವಾಪಸ್‌ ಕರೆಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ. ನಾನು ಅಧಿಕಾರಕ್ಕೆ ಎಂದೂ ಅಂಟಿಕೊಂಡು ಕುಳಿತಿರಲಿಲ್ಲ. ಇದ್ದಷ್ಟು ದಿನ ಜನರ ಸೇವೆ ಮಾಡಿದ್ದೇನೆ
– ಎಚ್‌.ಡಿ.ಕುಮಾರಸ್ವಾಮಿ, ನಿರ್ಗಮಿತ ಮುಖ್ಯಮಂತ್ರಿ

ಇದು ಪ್ರಜಾಪ್ರಭುತ್ವದ ಗೆಲುವು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ ವಾಗಲಿದೆ ಎಂದು ಕರ್ನಾಟಕದ ಜನತೆಗೆ ವಿಶ್ವಾಸಕೊಡಲು ಬಯಸುತ್ತೇನೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದ ಜನತೆಗೆ ಸಂತಸವಾಗಿದೆ. ನಾವು ಪುಣೆಯಲ್ಲಿದ್ದು ಆದಷ್ಟು ಬೇಗ ಬರುತ್ತೇವೆ. ಸಮ್ಮಿಶ್ರ ಸರಕಾರ ಪತನಗೊಳ್ಳಲು ಸಾ.ರಾ.ಮಹೇಶ್‌ ಕಾರಣ.
– ಎಚ್‌.ವಿಶ್ವನಾಥ್‌, ಅತೃಪ್ತ ಶಾಸಕ

ರಾಜ್ಯದ ಜನತೆಗೆ ಸಂದ ಜಯ. ಇನ್ನು ಮುಂದೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಹೊರಗೆ ಹೋಗಿರುವ ಶಾಸಕರಿಗೂ ಒಳ್ಳೆಯದಾಗಲಿದೆ.
-ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ

ಸರಕಾರಕ್ಕೆ ಬಹುಮತ ಇಲ್ಲದಿದ್ದರೂ ಕುರ್ಚಿಗೆ ಅಂಟಿಕೊಂಡಿದ್ದ ಕುಮಾರಸ್ವಾಮಿಯವರ ಸರಕಾರ ಪತನವಾಗಿ ರಾಜ್ಯಕ್ಕೆ ಗ್ರಹಣ ಬಿಟ್ಟಿದೆ.
-ಆರ್‌.ಅಶೋಕ್‌, ಬಿಜೆಪಿ ಶಾಸಕ

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು ಎಂದು ಜನತೆ ಬಯಸುತ್ತಿದ್ದಾರೆ.
-ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next