Advertisement

ಗುಜರಾತಗಿಂತ ಕರ್ನಾಟಕ ಅಭಿವೃದ್ಧಿಯತ್ತ

03:54 PM May 28, 2017 | Team Udayavani |

ಕಲಬುರಗಿ: ದೇಶದಲ್ಲಿಯೇ ಗುಜರಾತಗಿಂತಲೂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಸರಕಾರ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಲೋಕಸಭೆ ಮಾಜಿ ಅಧ್ಯಕ್ಷೆ ಹಾಗೂ ಬಾಬು ಜಗಜೀವನರಾಂ ಅವರ ಪುತ್ರಿ ಮೀರಾ ಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದರು. 

Advertisement

ಶನಿವಾರ ಇಲ್ಲಿನ ಇಂದಿರಾಸ್ಮಾರಕ ಭವನದ ಎದುರು ಸ್ಥಾಪಿಸಿರುವ ಡಾ| ಬಾಬು ಜಗಜೀವರಾಂ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೂಡಿ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು. ದೇಶದಲ್ಲಿ ದಲಿತರು, ಶೋಷಿತರು, ತುಳಿತಕ್ಕೊಳಗಾದ ಮತ್ತು ನಿರ್ಗತಿಕರ ಸೇವೆಯನ್ನು ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಡಾ| ಬಾಬು ಜಗಜೀವನರಾಂ ಮಾಡಿದ್ದರು. 

ಅವರಂತೆಯೇ ಎಲ್ಲ ವರ್ಗಗಳ ಹಿತ ಕಾಯ್ದುಕೊಂಡು ಉತ್ತಮ, ಜನಪರ ಆಡಳಿತ ನೀಡುವುದರೊಂದಿಗೆ ಅಭಿವೃದ್ಧಿಯತ್ತ ಸಿದ್ದರಾಮಯ್ಯ ಸರಕಾರ ಮುನ್ನಡೆಯುತ್ತಿದೆ ಎಂದರು. ದೇಶದಲ್ಲಿ ಶೂದ್ರಾತಿ ಶೂದ್ರರು ಹಸಿವಿಗಾಗಿ, ಆತ್ಮಸನ್ಮಾನಕ್ಕಾಗಿ ಸಾಯುತ್ತಿದ್ದಾರೆ. ಜಾತಿ ವ್ಯವಸ್ಥೆ ಇನ್ನಷ್ಟು ಹೆಚ್ಚಾಗುತ್ತಿದೆ.

ಜಾತಿ ಆಧಾರದಲ್ಲಿ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಹಸಿದವರಿಗೆ ತುತ್ತು ಅನ್ನ ಕೊಡಲಿಕ್ಕಾಗದವರು ಇವತ್ತು ದೇಶವನ್ನು ಜಾತಿ ಸಂಘರ್ಷದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ನಿಜಕ್ಕೂ ಕೆಳವರ್ಗದವರ, ಬಡತನ ರೇಖೆಗಿಂತ ಕೆಳಗಿರುವ ಜನರ ಬಗ್ಗೆ ಕಾಳಜಿ ಇದ್ದರೆ ಮುಂದಿನ ದಿನಗಳಲ್ಲಿ ಬಿಪಿಎಲ್‌ ಕಾರ್ಡುದಾರರೇ ಇಲ್ಲದ ಸಮಾಜವನ್ನು ನಾನು ನೋಡಬಯಸುತ್ತೇನೆ. 

ಅಂತಹದೊಂದು ಆಶಯವನ್ನು ಜಗಜೀವರಾಂ ಜೀವಿತಾವಧಿಯಲ್ಲಿ ತೋರಿಸಿದ್ದರು. ಆದರೆ, ಅದು ನನಸಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಾಮಾಜಿಕ, ಆರ್ಥಿಕ ಶೋಷಣೆ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವತ್ತ ಹೆಚ್ಚು ಚಿತ್ತ ನೆಡಬೇಕಿದೆ ಎಂದರು. ನಾನು 25 ವರ್ಷಗಳ ಹಿಂದೆ ಕಲಬುರಗಿಗೆ ಬಂದಿದ್ದೆ. 

Advertisement

ಅವತ್ತಿನ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ವ್ಯತ್ಯಾಸವಾಗಿದೆ. ರಸ್ತೆಗಳು ಚೆನ್ನಾಗಿವೆ, ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಇಲ್ಲಿಯ ಜನರು ತುಂಬಾ ಮುಗªರು. ಅಭಿವೃದ್ಧಿಗಾಗಿ ಬಹು ವರ್ಷಗಳಿಂದ ಕಾಯುತ್ತಾ ಕುಳಿತಿದ್ದಾರೆ. ಇದಕ್ಕಾಗಿ ಈ ಪ್ರದೇಶ ಹಿಂದುಳಿದ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. 

ಈ ಭಾಗದ ನಾಯಕರಾದ ಡಾ| ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಆರ್ಭಟಿಸಿದ ಪರಿಣಾಮ ಈ ಭಾಗಕ್ಕೆ 371 (ಜೆ) ಕಲಂ ಜಾರಿಯಾಗಲು ಸಾಧ್ಯವಾಗಿದೆ. ಆದ್ದರಿಂದ ಖರ್ಗೆ ಸಶಕ್ತ ಹಾಗೂ ಅಭಿವೃದ್ಧಿ ಚಿಂತಕ ಎಂದು ಬಣ್ಣಿಸಿದರು. ಈ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಹೆಚ್‌. ಆಂಜನೇಯ, ಡಾ| ಶರಣಪ್ರಕಾಶ ಪಾಟೀಲ ಇನ್ನೂ ಹಲವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next