Advertisement

Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್‌ ಸ್ಥಾಪನೆ: ಸಿಎಂ ಸಿದ್ದರಾಮಯ್ಯ

11:02 PM Nov 19, 2024 | Shreeram Nayak |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಮೈಸೂರು ಮತ್ತು ಬೆಳಗಾವಿಯನ್ನು ಮುಂಬರುವ ದಿನಗಳಲ್ಲಿ ಜಾಗತಿಕ ಆವಿಷ್ಕಾರ ಜಿಲ್ಲೆಗಳನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

Advertisement

ನಗರದ ಅರಮನೆ ಆವರಣದಲ್ಲಿ ಹಮ್ಮಿಕೊಂಡ ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌-2024’ಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕವು ದೇಶದ ಮೊದಲ “ಜಾಗತಿಕ ಸಾಮರ್ಥ್ಯ ಕೇಂದ್ರ’ಗಳು (ಜಿಸಿಸಿ) ನೀತಿಯನ್ನು ಜಾರಿಗೆ ತರುತ್ತಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯದ ಮೂರು ಜಿಲ್ಲೆಗಳನ್ನು “ಜಾಗತಿಕ ಆವಿಷ್ಕಾರ ಜಿಲ್ಲೆ’ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಬೆಂಗಳೂರು ಕೇಂದ್ರೀಕರಿಸುವುದರ ಜತೆಗೆ ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲಸೌಕರ್ಯ ಸೃಜಿಸಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ವಲಯಗಳನ್ನು ಉತ್ತೇಜಿಸಲು ಭೌತಿಕ ಮತ್ತು ಡಿಜಿಟಲ್‌ ಮೂಲಸೌಕರ್ಯಗಳ ಮೇಲೆ ಗಮನಾರ್ಹ ಹೂಡಿಕೆ ಮಾಡಿದೆ. ಮಂಗಳೂರಿನ ಫಿನ್‌ಟೆಕ್‌ ಲೀಡರ್‌ಶಿಪ್‌, ಹುಬ್ಬಳ್ಳಿ-ಧಾರವಾಡದ ಇವಿ ಕ್ಷೇತ್ರದ ಪ್ರಗತಿ ಮತ್ತು ಡ್ರೋನ್‌ಗಳು ಹಾಗೂ ಮೈಸೂರು ಪಿಸಿಬಿ ಕ್ಲಸ್ಟರ್‌ ಒಳಗೊಂಡಂತೆ ಸಮತೋಲಿತ ಪ್ರಾದೇಶಿಕ ಬೆಳವಣಿಗೆ ಸಾಧಿಸಲಾಗುತ್ತಿದೆ ಎಂದು ವಿವರಿಸಿದರು.

ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ಮೆನ್ಯುಫ್ಯಾಕ್ಚರಿಂಗ್‌ ಕ್ಲಸ್ಟರ್‌ ಅನ್ನು ಸ್ಥಾಪಿಸಲಾಗುವುದು. ಇದು ಜಾಗತಿಕ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸದೃಢಗೊಳಿಸುತ್ತದೆ. ಅಲ್ಲದೆ ಉದ್ಯೋಗಗಳನ್ನು ಸೃಷ್ಟಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದ ಅವರು, ಗ್ರಾಮೀಣ ಸಂಪರ್ಕಕ್ಕಾಗಿ “ನಮ್ಮ ಗ್ರಾಮ ನಮ್ಮ ಯೋಜನೆ’ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳು ಸಂಪರ್ಕ ಹಾಗೂ ಆರ್ಥಿಕ ಅವಕಾಶಗಳನ್ನು ವೃದ್ಧಿಸಿವೆ ಎಂದು ಹೇಳಿದರು.

ರಾಜ್ಯದ ಸ್ಟಾರ್ಟ್‌ಅಪ್‌ ಬೆಳವಣಿಗೆ 2022ರಿಂದ 2023ರ ವರೆಗೆ ಶೇ. 18.2 ಏರಿಕೆ ಕಂಡಿದ್ದು, 3,036 ಸ್ಟಾರ್ಟ್‌ಅಪ್‌ಗ್ಳನ್ನು ಹೊಂದಿದೆ. ಇದು ದೇಶದ ಒಟ್ಟು ಸ್ಟಾರ್ಟ್‌ಅಪ್‌ಗ್ಳಲ್ಲಿ ಶೇ. 8.7ರಷ್ಟಾಗಿದೆ. ಆ ಮೂಲಕ ಅಗ್ರಸ್ಥಾನದಲ್ಲಿದೆ. ಇದು ಉದ್ಯಮಿಗಳಿಗೆ ಸರಕಾರದ ಬೆಂಬಲ ಮತ್ತು ಪೂರಕ ಅವಕಾಶಗಳನ್ನು ಬಿಂಬಿಸುತ್ತದೆ ಎಂದರು.

Advertisement

25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕರ್ನಾಟಕವು ಆ್ಯನಿಮೇಷನ್‌, ವಿಜ್ಯುವಲ್‌ ಎಫೆಕ್ಟ್, ಗೇಮಿಂಗ್‌ ಮತ್ತು ಎಕ್ಸ್‌ಟೆಂಡೆಡ್‌ ರಿಯಾಲಿಟಿ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಿದೆ. ಈ ವಲಯದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿರುವ ರಾಜ್ಯ 2025ರ ವೇಳೆಗೆ ಈ ಕ್ಷೇತ್ರದಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ ಎಂದು ಹೇಳಿದರು.

ಐಟಿ ದಿಗ್ಗಜರಾದ ಅಜೀಂ ಪ್ರೇಮ್‌ಜೀ ಮತ್ತು ನಾರಾಯಣಮೂರ್ತಿ ಅವರು ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರೆ, ರಾಜಧಾನಿಯು ಐಟಿ ಹಬ್‌ ಆಗಿ ಬೆಳೆಯುತ್ತಿರಲಿಲ್ಲ. ಸಾವಿರಾರು ಜನರು ತಮ್ಮ ಸ್ಟಾರ್ಟ್‌ಅಪ್‌ಗಳಿಗೆ ಬೆಂಗಳೂರನ್ನು ಆಯ್ಕೆ ಮಾಡದೆ ಇದ್ದಿದ್ದರೆ ಬೆಂಗಳೂರು ಲಕ್ಷಾಂತರ ಜನರಿಗೆ ಆಸರೆ ಒದಗಿಸುತ್ತಿರಲಿಲ್ಲ ಎಂದು ಸ್ಮರಿಸಿದರು.

ನಿಪುಣ ಕರ್ನಾಟಕ ಯೋಜನೆಗೆ ಚಾಲನೆ
ಬೆಂಗಳೂರು: ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಸರಕಾರದ ಮಹತ್ವಾಕಾಂಕ್ಷಿ “ನಿಪುಣ ಕರ್ನಾಟಕ’ ಯೋಜನೆಗೆ ಚಾಲನೆ ನೀಡಲಾಯಿತು.

ಯೋಜನೆ ಅಡಿ ಮೈಕ್ರೋಸಾಫ್ಟ್, ಇಂಟೆಲ್‌, ಆ್ಯಕ್ಸೆಂಚರ್‌, ಐಬಿಎಂ ಮತ್ತು ಬಿಎಫ್ಎಸ್‌ ಕಾಂಸಾರ್ಟಿಯಂ ಐದು ದೈತ್ಯ ಐಟಿ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡ ಸರಕಾರ, ಅದರಡಿ ಒಂದು ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಲು ಉದ್ದೇಶಿಸಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂಜಿನಿಯರಿಂಗ್‌ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಕೃತಕ ಬುದ್ಧಿಮತ್ತೆಯ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಹೇಳಿಮಾಡಿಸಿದ ತಾಣವಾಗಿದೆ.

ಎನ್‌ಐಪಿಯುಎನ್‌ಎ ಕರ್ನಾಟಕದಡಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಕಾರ್ಮಿಕ ಪಡೆಯನ್ನು ತಯಾರು ಮಾಡಲು ಸರಕಾರ ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ. ಈಗಷ್ಟೇ ಐದು ಕಂಪೆನಿಗಳೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯೋಜನೆ ಲಾಂಛನ ಮತ್ತು ತರಬೇತಿ ನೀಡಲು ಇಚ್ಛಿಸುವ ಕಂಪೆನಿಗಳು ಹಾಗೂ ತರಬೇತಿ ಪಡೆಯಲಿರುವ ಅಭ್ಯರ್ಥಿಗಳ ಮಾರ್ಗಸೂಚಿಗಳನ್ನೂ ಇದೇ ವೇಳೆ ಬಿಡುಗಡೆ ಮಾಡಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next