ಬೆಂಗಳೂರು: ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಹಿಂಪಡೆಯಬಾರದು ಎಂದು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ಭಾರೀ ಆಗ್ರಹ ವ್ಯಕ್ತವಾಗಿದೆ. ಸೋಮವಾರ ಸ್ವಲ್ಪ ಹೊತ್ತು “ಎನ್‌ಇಪಿ ಬೇಕು’ ಎಂಬ ಹ್ಯಾಷ್‌ಟ್ಯಾಗ್ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿ ಟ್ರೆಂಡ್ ಕೂಡ ಆಗಿದೆ.
ಎನ್‌ಇಪಿ ರದ್ದು ಮಾಡುವ ಸರಕಾರದ ನಡೆಯನ್ನು ಬಿಜೆಪಿ, ಎಬಿವಿಪಿ ಸಹಿತ ಹಲವು ಸಂಘಟನೆಗಳು ವಿರೋಧಿಸುತ್ತಿದ್ದು, ಒಂದು ಕೋಟಿ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿವೆ. ಈ ನಿಟ್ಟಿನಲ್ಲಿ ಸೋಮವಾರ ಎಕ್ಸ್ ಮೂಲಕ ನಡೆದ ಎನ್‌ಇಪಿ ಬೇಕು ಅಭಿಯಾನದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಉನ್ನತ ಶಿಕ್ಷಣ ಸಚಿವ ಡಾ| ಸಿ. ಎನ್. ಅಶ್ವತ್ಥನಾರಾಯಣ, ಪ್ರಮುಖರಾದ ಸಿ. ಟಿ.ರವಿ, ಪಿ. ಸಿ. ಮೋಹನ್, ಬಸನಗೌಡ ಪಾಟೀಲ್ ಯತ್ನಾಳ್, ಉದಯ ಗರುಡಾಚಾರ್, ಅರುಣ್ ಶಹಾಪುರ ಸಹಿತ ಹಲವರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಎಬಿವಿಪಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಸಂಘ, ವಿದ್ಯಾಭಾರತಿ, ಭಾರತೀಯ ಶಿಕ್ಷಣ ಮಂಡಲ, ಸಂಸ್ಕೃತ ಭಾರತೀ, ಗುರುಕುಲ, ಜನಸೇವಾ ಸೇವಾ ಕೇಂದ್ರ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಪೀಪಲ್ಸ್ ಫಾರಂ ಫಾರ್ ಕರ್ನಾಟಕ ಎಜುಕೇಷನ್ ಮುಂತಾದ ಸಂಘಟನೆಗಳು ಈ ಅಭಿಯಾನದಲ್ಲಿ ಭಾಗಿಯಾಗಿವೆ.