ಮಂಗಳೂರು: “ಗ್ಯಾರಂಟಿ’ ಸಹಿತ ಸರಕಾರದ ಯೋಜನೆಗಳು ಬಡವರು, ಶೋಷಿತರ ಉದ್ಧಾರಕ್ಕಾಗಿಯೇ ಹೊರತು ಶ್ರೀಮಂತರಿಗಲ್ಲ. ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಪಡೆಯುತ್ತಿದ್ದು, ಅದಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರಿಗೆ ನಿಜಕ್ಕೂ ಅರ್ಹತೆ ಹಾಗೂ ಅಗತ್ಯವಿದೆಯೋ ಅವರಿಗೆ ಗ್ಯಾರಂಟಿ ಯೋಜನೆ ತಲುಪಬೇಕು. ಅಗತ್ಯವಿಲ್ಲದವರಿಗೆ ಕೊಟ್ಟು ಪ್ರಯೋಜನವಿಲ್ಲ ಎಂದರು.
ದಾವಣಗೆರೆಯಲ್ಲಿ ಕಾಲರಾ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಆಸ್ಪತ್ರೆ ವ್ಯವಸ್ಥೆ ಚೆನ್ನಾಗಿದೆ. ಸ್ಥಳೀಯಾಡಳಿತ ಜತೆ ಈ ಬಗ್ಗೆ ಮಾತನಾಡುತ್ತೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ ಎಂದರು.
ಆಹಾರ ಸುರಕ್ಷೆಗೆ ವಿಶೇಷ ಒತ್ತು
ರಾಜ್ಯದಲ್ಲಿ ಆಹಾರದ ಗುಣಮಟ್ಟ ವನ್ನು ಪರಿಶೀಲಿಸಲಾಗುತ್ತಿದೆ. ಆಹಾರದ ತಯಾರಿ, ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.