Advertisement
ದಿಲ್ಲಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾಲು ಸಾಲಾಗಿ ಮುಖಂಡರನ್ನು ಭೇಟಿಯಾಗಿದ್ದಾರೆ. ರವಿವಾರ ರಾತ್ರಿಯೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜತೆ ಚರ್ಚಿಸಿದ್ದ ಸಿಎಂ, ಸೋಮವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯಕ್ಕೆ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ. ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ನಡೆಸಿದ್ದು ಸಂಪುಟಕ್ಕೆ ಸೇರುವ ಸಂಭಾವ್ಯರ ಎರಡು-ಮೂರು ಪಟ್ಟಿ ಕೊಟ್ಟು ಬಂದಿದ್ದಾರೆ.
Related Articles
Advertisement
ಅತ್ತ ದಿಲ್ಲಿಯಲ್ಲೂ ಲಕ್ಷ್ಮಣ ಸವದಿ, ಆರ್. ಅಶೋಕ್, ಸಿ.ಪಿ. ಯೋಗೇಶ್ವರ್, ಸಿ.ಸಿ. ಪಾಟೀಲ್ ಸಹಿತ ಅನೇಕ ಮಾಜಿ ಸಚಿವರು ಮತ್ತೆ ಸಚಿವ ಸಂಪುಟವನ್ನು ಪ್ರವೇಶಿಸಲು ನಿರಂತರ ಕಸರತ್ತು ನಡೆಸಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ, ರಾಜು ಗೌಡ ಕೂಡ ದಿಲ್ಲಿಯಲ್ಲೇ ಇದ್ದಾರೆ.
ಬುಧವಾರ ಅಥವಾ ಗುರುವಾರ ಪ್ರಮಾಣ?:
ಒಂದು ವೇಳೆ ಸಚಿವ ಸಂಪುಟ ರಚನೆಗೆ ಜೆ.ಪಿ. ನಡ್ಡಾ ಅವರು ಒಪ್ಪಿಗೆ ನೀಡಿದರೆ ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ರಚನೆಯಾಗುವ ಸಾಧ್ಯತೆ ಇದೆ. ನೂತನ ಸಚಿವ ಸಂಪುಟ ರಚನೆಗೆ ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ಸೂತ್ರ ರಚನೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅದರಂತೆಯೇ ಡಿಸಿಎಂ ಮತ್ತು ಉಳಿದ ಸಚಿವರ ನೇಮಕ ಮಾಡುವ ಕುರಿತು ಸಿಎಂ ಬೊಮ್ಮಾಯಿ ಅವರು ಜೆ.ಪಿ. ನಡ್ಡಾ ಜತೆಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಮತ್ತು ವರಿಷ್ಠರು ಚರ್ಚೆ ನಡೆಸಿದ್ದು, ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿಯನ್ನು ಸಂಪುಟ ರಚನೆಯ ಸಂದರ್ಭದಲ್ಲಿ ವರಿಷ್ಠರು ಕಳುಹಿಸಿ ಕೊಡಲಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ಲೆಕ್ಕಾಚಾರ:
ಮೂಲಗಳ ಪ್ರಕಾರ ಎರಡು ಹಂತಗಳಲ್ಲಿ ಸಂಪುಟ ವಿಸ್ತರಣೆಗೆ ಚಿಂತನೆ ನಡೆಸಲಾಗಿದ್ದು, ಮೊದಲ ಹಂತದಲ್ಲಿ 10ರಿಂದ 15 ಶಾಸಕರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.
ಡಿಸಿಎಂ ಸ್ಥಾನಕ್ಕೆ ಜಾತಿ ಮತ್ತು ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಹಲವರ ಹೆಸರು ಕೇಳಿಬರುತ್ತಿದೆ. ಅರವಿಂದ ಲಿಂಬಾವಳಿ, ಆರ್. ಅಶೋಕ್, ಬಿ. ಶ್ರೀರಾಮುಲು, ಸಿ.ಟಿ. ರವಿ ಅವರ ಹೆಸರುಗಳು ಡಿಸಿಎಂ ಹುದ್ದೆಗೆ ಮುಂಚೂಣಿಯಲ್ಲಿದೆ.
ಸಂಪುಟ ರಚನೆ ಒಮ್ಮತದ ನಿರ್ಧಾರ ಆಗಬೇಕು ಎನ್ನುವುದು ನಮ್ಮೆಲ್ಲರ ಅಭಿಪ್ರಾಯ. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ ಎನ್ನುವುದು ಎಲ್ಲ ಶಾಸಕರಿಗೂ ಗೊತ್ತಿದೆ. ಪ್ರಾದೇಶಿಕತೆ, ಜಾತಿ ಎಲ್ಲ ವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಹಿಂದೆ ಇದ್ದ ಸಚಿವ ಸಂಪುಟವನ್ನೂ ಗಮನದಲ್ಲಿ ಇರಿಸಿ ಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಂಪುಟಕ್ಕೆ ವಿಜಯೇಂದ್ರ ?:
ಸಚಿವ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸ್ಥಾನ ನೀಡಲಾಗುತ್ತದೆಯೇ ಇಲ್ಲವೇ ಎನ್ನುವ ಚರ್ಚೆ ಆರಂಭವಾಗಿದೆ. ಅವರನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿ, ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿವೆ ಎನ್ನಲಾಗಿದೆ.
ಇಂದು ಪಟ್ಟಿ ಬಿಡುಗಡೆ : ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಎರಡು- ಮೂರು ಪಟ್ಟಿ ನೀಡಲಾಗಿದ್ದು, ಅಂತಿಮ ಪಟ್ಟಿಯನ್ನು ವರಿಷ್ಠರು ಬಿಡುಗಡೆ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವರ ಪಟ್ಟಿಯನ್ನು ನಾವೇ ಕಳುಹಿಸುತ್ತೇವೆ ಎಂದು ವರಿಷ್ಠರು ಹೇಳಿದ್ದಾರೆ. ಮಂಗಳವಾರ ಎಲ್ಲವೂ ಅಂತಿಮವಾಗಲಿದೆ. ನಾವು ಬೇರೆ ಬೇರೆ ಲೆಕ್ಕಾಚಾರದ ಎರಡು -ಮೂರು ಪಟ್ಟಿಗಳನ್ನು ಕೊಟ್ಟಿದ್ದೆವು. ಅಂತಿಮ ನಿರ್ಧಾರ ವರಿಷ್ಠರದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ನಡ್ಡಾ ಭೇಟಿಯ ಬಳಿಕ ತಿಳಿಸಿದರು.
ವರಿಷ್ಠರು ಇನ್ನೊಂದು ಬಾರಿ ಚರ್ಚಿಸಿ ತೀರ್ಮಾನಿಸುತ್ತಾರೆ. ಆಮೇಲೆ ರಾಜ್ಯಾಧ್ಯಕ್ಷ ನಳಿನ್ ಜತೆ ಚರ್ಚಿಸಿ ಯಾವ ದಿನ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಇರಿಸಿಕೊಳ್ಳಬೇಕೆಂದು ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇಲ್ಲಿ ಯಾರೂ ವಲಸಿಗರಿಲ್ಲ, ಎಲ್ಲರೂ ಬಿಜೆಪಿಯವರೇ. ಯಾರೂ ಆತಂಕ ಪಡಬೇಕಾಗಿಲ್ಲ. ವರಿಷ್ಠರು ಎಷ್ಟು ಜನರ ಹೆಸರುಗಳಿರುವ ಪಟ್ಟಿ ಬಿಡುಗಡೆ ಮಾಡುತ್ತಾರೆ ಎನ್ನುವುದು ನನಗೂ ಗೊತ್ತಿಲ್ಲ. -ಬಸವರಾಜ ಬೊಮ್ಮಾಯಿ, ಸಿಎಂ