ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂಬರುವ ದಿನಗಳಲ್ಲಿ ಕಾನೂನು ಪದವಿ ಕಾಲೇಜುಗಳಲ್ಲಿ ಎನ್‌ಸಿಸಿ ಮಾದರಿಯಲ್ಲಿ ಕಾನೂನು ಸೇವೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೂರು ತಿಂಗಳ “ಕರ್ನಾಟಕ ರಾಜ್ಯ ಕಾನೂನು ಕೆಡಿಟ್ ಕಾರ್ಪ್ಸ್’ ಕೋರ್ಸ್ ಸೇರ್ಪಡೆಗೊಳ್ಳಲಿದೆ.
“ಈಗಾಗಲೇ ಕಾನೂನು ಪದವಿ ಕಾಲೇಜುಗಳಲ್ಲಿ ಕಾನೂನು ಸೇವಾ ಪ್ರಾಧಿ ಕಾರದ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ದಿಸೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನೂನು ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲೇ ಎನ್‌ಸಿಸಿ ಅಥವಾ ಎನ್ನೆಸ್ಸೆಸ್ ಮಾದರಿಯಲ್ಲಿ ಮೂರ್‍ನಾಲ್ಕು ತಿಂಗಳ “ಕಾನೂನು ಕೆಡಿಟ್ ಕಾರ್ಪ್ಸ್ ‘ ಪರಿಚಯಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೂ ಮನವಿ ಮಾಡಲಾಗುತ್ತಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ತಿಳಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಯಲಿರುವ ಲೋಕ ಅದಾಲತ್ ಹಿನ್ನೆಲೆಯಲ್ಲಿ ಗುರುವಾರ “ಉದಯವಾಣಿ’ ಬೆಂಗಳೂರು ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.
663 ಕೋಟಿ ಪ್ರಕರಣ; ಸಾವಿರ ಕೋಟಿ ಬಾಕಿ! :
ರಾಜ್ಯದಲ್ಲಿ ಬಾಕಿ ಇರುವ ಕೋಟ್ಯಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕೂಡ ಕಾನೂನು ಸೇವಾ ಪ್ರಾಧಿಕಾರದಡಿ ತಂದು ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ರಾಜ್ಯದಲ್ಲಿ ಸುಮಾರು 663 ಕೋಟಿ ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿವೆ ಎಂದು ವೀರಪ್ಪ ತಿಳಿಸಿದರು.