ಬೆಂಗಳೂರು: ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದ ಬೆನ್ನಲ್ಲೇ ಈ ಎರಡೂ ದೇಶಗಳ ಲ್ಲಿರುವ ಹತ್ತಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ಸಾಗಿದೆ.
ನೂರಾರು ಸಂಖ್ಯೆಯಲ್ಲಿ ಕನ್ನಡಿಗರು ಕೂಡ ಅಲ್ಲಿ ವೈದ್ಯಕೀಯ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳನ್ನು ವ್ಯಾಸಂಗ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲಿ ನೆಲೆಸಿರು ವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಹೆತ್ತವರಲ್ಲಿ ಆತಂಕ ಮನೆಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಭಾರತದ ಹಲವು ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದೆ. ಇದರಿಂದ ನೂರು ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಸಿಲುಕಿದ್ದಾರೆ. ಇವರಲ್ಲಿ 10ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯ ಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಯೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಿದರು. “ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
ನೋಡಲ್ ಅಧಿಕಾರಿ ನೇಮಕ: ಈ ಮಧ್ಯೆ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರಕಾರವು ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಡಾ| ಮನೋಜ್ ರಾಜನ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಸರಕಾರ ನೇಮಿಸಿದೆ. ಸಂತ್ರಸ್ತರಿ ಗಾಗಿ ಸಹಾಯವಾಣಿ 080- 1070, 22340676 ತೆರೆಯಲಾಗಿದೆ. ಇದು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಇ-ಮೇಲ್: manoarya@gmail.com, revenuedmkar@gmail.com ಮೂಲಕ ಸಂಪರ್ಕಿಸಬಹುದು. ಇದಲ್ಲದೆ, ಕೇಂದ್ರಕ್ಕೂ ಕೂಡ ಸಹಾಯವಾಣಿ ನೀಡುವಂತೆ ರಾಜ್ಯ ಸರಕಾರ ಮನವಿ ಮಾಡಿದೆ.