Advertisement

ಸೋಮವಾರ “ವಿಶ್ವಾಸ”ದ ಆಟ

09:27 AM Jul 21, 2019 | mahesh |

ಶುಕ್ರವಾರವೂ “ವಿಶ್ವಾಸ’ಕ್ಕೊಂದು ಅಂತ್ಯ ಸಿಗಲಿಲ್ಲ. ಸ್ವತಃ ರಾಜ್ಯಪಾಲರೇ ಎರಡೆರಡು ಬಾರಿ ವಿಶ್ವಾಸ ಸೂಚನೆಯನ್ನು ಮತಕ್ಕೆ ಹಾಕುವಂತೆ ಗಡುವು ವಿಧಿಸಿದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಪಾಲಿಸದಿದ್ದರಿಂದ ರಾಜ್ಯದಲ್ಲಿ ಹೊಸದೊಂದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರ ನಡುವೆಯೇ ವಿಶ್ವಾಸಮತದ ಕದನ ಸೋಮವಾರಕ್ಕೆ ಹೋಗಿದ್ದು, ಸರಕಾರ ಉಳಿಯಬೇಕಾದರೆ ಶನಿವಾರ ಮತ್ತು ರವಿವಾರ ರಾಜ್ಯ ರಾಜಕೀಯದಲ್ಲಿ ಪವಾಡಗಳೇ ನಡೆಯಬೇಕಾದೀತು. ಈಗ ಎಲ್ಲರ ಕಣ್ಣು ಸಹಜವಾಗಿಯೇ ರಾಜಭವನದತ್ತ ನೆಟ್ಟಿದೆ.

Advertisement

ಸಾಂವಿಧಾನಿಕ ಬಿಕ್ಕಟ್ಟು
ಗುರುವಾರ ರಾತ್ರಿ ವಿಶ್ವಾಸಮತಕ್ಕೆ ಸಿಕ್ಕ ತಿರುವು ಶುಕ್ರವಾರವೂ ಮುಂದುವರಿಯಿತು. ಅಪರಾಹ್ನ 1.30ರ ವೇಳೆಗೆ ಬಹುಮತ ಸಾಬೀತು ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೆ ರಾಜ್ಯಪಾಲರು ವಿಧಿಸಿದ್ದ ಗಡುವು ಪಾಲನೆಯಾಗಲೇ ಇಲ್ಲ. ಸ್ವಲ್ಪ ಹೊತ್ತಿನಲ್ಲೇ, ಮತ್ತೆ ರಾಜಭವನದಿಂದ ಸಿಎಂಗೆ ಎರಡನೇ ಗಡುವು ಬಂದಿತಲ್ಲದೆ, ದಿನದ ಅಂತ್ಯಕ್ಕೆ ವಿಶ್ವಾಸಮತ ಸಾಬೀತು ಮಾಡಲೇಬೇಕು ಎಂದು ಸೂಚಿಸಲಾಯಿತು. ಶುಕ್ರವಾರ ಕಳೆದರೂ ಇದೂ ಆಗಲಿಲ್ಲ. ಸಿಎಂ ರಾಜ್ಯಪಾಲರ ನಿರ್ದೇಶನ ಮೀರಿ ರುವುದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಅಥವಾ ವಿಧಾನಸಭೆ ಅಮಾನತಿನಲ್ಲಿಡುವ ಸಾಧ್ಯತೆಗಳ ಚರ್ಚೆ ಶುರುವಾಗಿದೆ. ಒಂದು ವೇಳೆ ರಾಜ್ಯಪಾಲರು ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಕಳುಹಿಸಿದರೆ, ಇದನ್ನು ಮಾನ್ಯ ಮಾಡಿ ಸರಕಾರ ವಜಾ ಮಾಡುವ ಸಾಧ್ಯತೆಗಳಿವೆ.

ಗವರ್ನರ್‌ ಅಧಿಕಾರ: ತೀವ್ರ ಚರ್ಚೆ
ರಾಜ್ಯಪಾಲರ ಗಡುವು ಪತ್ರದ ಬಗ್ಗೆ ಸದನಕ್ಕೆ ಮಾಹಿತಿ ಕೊಟ್ಟ ಸಿಎಂ, ಈ ಹಂತದಲ್ಲಿ ರಾಜಭವನ ತಮಗೆ ನಿರ್ದೇಶನ ನೀಡುವ ಅಧಿಕಾರ ಇದೆಯೇ ಎಂಬ ಬಗ್ಗೆ ಸ್ಪೀಕರ್‌ ಸಲಹೆ ಕೇಳಿದರು. ರಾಜ್ಯಪಾಲರ ಪತ್ರಕ್ಕೂ ಅಸಮಾಧಾನ ಹೊರ ಹಾಕಿದ್ದಲ್ಲದೆ, ಈಗ ಅವರಿಗೆ ಕುದುರೆ ವ್ಯಾಪಾರದ ಅರಿವಾಯಿತಾ ಎಂದೂ ಪ್ರಶ್ನಿಸಿದರು. ಈ ನಡುವೆ ರಾಜ್ಯಪಾಲರ ಮಧ್ಯಪ್ರವೇಶವನ್ನು ಪ್ರಶ್ನಿಸಿ ಸಿಎಂ ಸುಪ್ರೀಂ ಕೋರ್ಟಿಗೂ ಮೊರೆ ಹೋದರು.

ಮುಂದೂಡಿಕೆ ಗದ್ದಲ
ಏನಾದರೂ ಸರಿಯೇ ಶುಕ್ರವಾರವೇ ವಿಶ್ವಾಸಮತದ ನಿರ್ಧಾರವಾಗಬೇಕು ಎಂಬುದು ಬಿಜೆಪಿ ಸದಸ್ಯರ ಒತ್ತಡ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸೋಮವಾರದವರೆಗೆ ಅವಕಾಶ ಕೊಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು. ಚರ್ಚೆ ನಡೆಸಲು ಇನ್ನೂ 20 ಮಂದಿ ಇದ್ದು, ಯಾವ ಸದಸ್ಯರ ಹಕ್ಕನ್ನೂ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂಬ ವಾದ ಮಂಡಿಸಿದರು. ಆದರೂ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು 8.15ರ ಹೊತ್ತಿಗೆ ಸದನವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದ್ದಲ್ಲದೆ, ಸೋಮವಾರವೇ ವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಲು ಸಹಕರಿಸಬೇಕು ಎಂದು ಆಡಳಿತ ಪಕ್ಷಕ್ಕೆ ತಾಕೀತು ಮಾಡಿದರು.

ರೆಸಾರ್ಟ್‌ಗೆ ಶಿಫ್ಟ್
ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ 3ಪಕ್ಷಗಳ ಶಾಸಕರು ಮತ್ತೆ ಹೊಟೇಲ್‌ ಹಾಗೂ ರೆಸಾರ್ಟ್‌ಗೆ ಶಿಫ್ಟ್ ಆದರು. ಕೆಲವು ಶಾಸಕರು ತಮ್ಮ ನಾಯಕರ ಅನುಮತಿ ಪಡೆದು ಕ್ಷೇತ್ರಗಳಿಗೂ ಹೋದರು.

Advertisement

ನೀವು ಕರೆದುಕೊಂಡು ಹೋಗಿರುವವರನ್ನು ಅಷ್ಟು ಸುಲಭವಾಗಿ ಕರೆತರಲು ಆಗುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ನೀವು ಹರಸಾಹಸ ಮಾಡಿ ಇಷ್ಟೆಲ್ಲ ಕಸರತ್ತು ನಡೆಸಿ ಅಧಿಕಾರ ಪಡೆದುಕೊಂಡು ರಾಜ್ಯದ ಅಭಿವೃದ್ಧಿ, ಜನರ ಸೇವೆ ಯಾವ ರೀತಿ ಮಾಡು ತ್ತೀರೋ ನೋಡೋಣ. ನಾನು ರಾಜಕಾರಣದಲ್ಲಿ ಇರುತ್ತೇನೆ. ಎಲ್ಲಿಯೋ
ಓಡಿ ಹೋಗಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಮುಂದೇನಾಗಲಿದೆ?
ರಾಜ್ಯಪಾಲರ ಮುಂದಿನ ನಡೆ?
1 ರಾಜ್ಯಪಾಲರು ನಿರ್ದೇಶನ ಪಾಲನೆಯಾಗಿಲ್ಲ ಎಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಬಹುದು.
2 ವಿಧಾನಸಭೆಯನ್ನು ಕೊಂಚ ಕಾಲ ಅಮಾನತು ಮಾಡಬಹುದು.
3 ರಾಷ್ಟ್ರಪತಿ ಆಡಳಿತ ಹೇರಲುಕೇಂದ್ರಕ್ಕೆ ಶಿಫಾರಸು ಮಾಡಬಹುದು.

ಬಿಜೆಪಿ ಏನು ಮಾಡಬಹುದು?
1 ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರಿಗೆ ಮನವಿ ಮಾಡಬಹುದು.
2 ಬಹುಮತ ಸಾಬೀತುಪಡಿಸಲಾಗದೆ ಸರಕಾರ ಪತನವಾಗಲಿ ಎಂದು ಕಾಯಬಹುದು.
3 ಅತೃಪ್ತರು ವಾಪಸ್‌ ಬರದಂತೆ ನೋಡಿಕೊಳ್ಳುವುದು ಹಾಗೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು.
4 ರಾಜ್ಯಪಾಲರ ಗಡುವನ್ನು ಪಾಲಿಸದ ಸರಕಾರದ ನಿಲುವಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಬಹುದು.

ಸರಕಾರ ಏನು ಮಾಡಬಹುದು?
1 ರಾಜ್ಯಪಾಲರ ಮಧ್ಯಪ್ರವೇಶವನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್‌ ಮೊರೆ ಹೋಗಿರುವ ಸರಕಾರ ಕಾನೂನು ಹೋರಾಟ ಮುಂದುವರಿಸಬಹುದು.
2 ವಿಶ್ವಾಸ ಮತ ಯಾಚನೆಗೆ ಸಾಧ್ಯವಾಗದಿರುವುದನ್ನು ಅರಿತು ಮೊದಲೇ ರಾಜೀನಾಮೆ ನೀಡಬಹುದು ಅಥವಾ ಮತಯಾಚಿಸಿ ಗೆಲ್ಲಲಾಗದೆ ಸರಕಾರ ಪತನವಾಗಬಹುದು.
3 ಬಹುಮತ ಸಾಬೀತುಪಡಿಸುವ ಸಲುವಾಗಿ ರಾಜೀನಾಮೆ ನೀಡಿರುವ ನಾಲ್ವರು ಶಾಸಕರನ್ನು ಸೆಳೆಯಬಹುದು.
4 ರಿವರ್ಸ್‌ ಆಪರೇಷನ್‌ಗೆ ಪ್ರಯತ್ನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next