ನವದೆಹಲಿ: ವೈವಾಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಕರ್ನಾಟಕ ಸರ್ಕಾರ ಬೆಂಬಲಿಸಿದೆ.
ಈ ಪ್ರಕರಣದಲ್ಲಿ ಎಲ್ಲ ಕಾನೂನಾತ್ಮಕ ಅಂಶಗಳನ್ನು ಗಣನೆಗೆ ತೆಗೆದುಕೊಂಡೇ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ ಎಂದು ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
“ಪತ್ನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಆರೋಪಿ ಸಲ್ಲಿಸಿರುವ ಮೇಲ್ಮನವಿಯನ್ನು ವಜಾಗೊಳಿಸಬೇಕು,’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
“ಪತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಮಗಳಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಮದುವೆಯಾದ ದಿನದಿಂದಲೂ ಪತಿಯ ಪಾಲಿಗೆ ತಾನು ಲೈಂಗಿಕ ಗುಲಾಮಳಂತಾಗಿದ್ದೇನೆ,’ ಎಂದು ಆರೋಪಿಸಿ ಕರ್ನಾಟಕದಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಪತ್ನಿ ಮೇಲೆ ಅತ್ಯಾಚಾರ ನಡೆಸಿದ್ದಕ್ಕಾಗಿ ಪತಿಯನ್ನು ವಿಚಾರಣೆಗೆ ಒಳಪಡಿಸಬಹುದು ಹಾಗೂ ಐಪಿಸಿ ಸೆಕ್ಷನ್ 375(ಅತ್ಯಾಚಾರ)ರ ಅಡಿ ಪತಿಗೆ ನೀಡಿರುವ ವಿನಾಯಿತಿ ಪ್ರಶ್ನಾರ್ಹವಲ್ಲ ಎಂದು ತೀರ್ಪು ನೀಡಿತ್ತು.