Advertisement

Karnataka Government: ಎಸ್ಸಿ , ಎಸ್ಟಿಗೆ ಶೇ. 24.01 ಅನುದಾನ ಕಡ್ಡಾಯ: ಸಿಎಂ

12:35 AM Jul 09, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ. 24.01 ಅನುದಾನ ಕಡ್ಡಾಯವಾಗಿ ವೆಚ್ಚ ಮಾಡುವುದನ್ನು ಖಾತ್ರಿಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ರಾಜ್ಯ ಹಣಕಾಸು ನಿಧಿ (ಎಸ್‌ಎಫ್ಸಿ) ಮುಕ್ತನಿಧಿ ಯೋಜನೆಯಡಿ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಶೇ. 24.01 ಅನುದಾನ ಕಡ್ಡಾಯವಾಗಿ ವೆಚ್ಚ ಮಾಡುವುದನ್ನು ಖಾತ್ರಿಪಡಿಸಬೇಕು ಎಂದು ಆದೇಶ ನೀಡಿದ್ದಾರೆ.

ಅದೇ ರೀತಿ 15ನೇ ಹಣಕಾಸು ಆಯೋಗದಡಿ ಮಂಜೂರಾಗಿದ್ದ 33,803 ಕಾಮಗಾರಿಗಳ ಪೈಕಿ 23,714 ಪೂರ್ಣಗೊಂಡಿವೆ. ಬಿಡುಗಡೆಯಾಗಿದ್ದ 2,799 ಕೋಟಿ ರೂ. ಪೈಕಿ 1,883 ಕೋಟಿ ರೂ. ವೆಚ್ಚವಾಗಿದೆ. ಇನ್ನೂ 916 ಕೋಟಿ ರೂ.ಗಳ 10,089 ಕಾಮಗಾರಿ ಬಾಕಿಯಿದ್ದು, ಮುಂದಿನ ಎರಡು ವಾರದೊಳಗೆ ಟೆಂಡರ್‌ ಕರೆದು ನಿಗದಿತ ಅವಧಿಯೊಳಗೆ ಅನುದಾನ ಬಳಕೆ ಮಾಡಬೇಕು ಎಂದಿದ್ದಾರೆ.

ಅಭಿಯಾನದಂತೆ ಆಸ್ತಿ ತೆರಿಗೆ ವಸೂಲಿ ಮಾಡಿ
ಕಳೆದ ವರ್ಷದ 224 ಕೋಟಿ ರೂ. ಆಸ್ತಿ ತೆರಿಗೆ ವಸೂಲಾತಿಗೆ ಬಾಕಿಯಿದೆ. ಹಳೆಯ ಬಾಕಿ ಸಂಪೂರ್ಣವಾಗಿ ವಸೂಲು ಮಾಡಬೇಕು. ಪ್ರಸ್ತುತ ವರ್ಷದ ಜೂನ್‌ ಅಂತ್ಯದವರೆಗೆ 806 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದ್ದು, 1053 ಕೋಟಿ ರೂ. ವಸೂಲಾತಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ಅಭಿಯಾನದ ರೀತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಯನ್ನು ಕೈಗೊಳ್ಳಬೇಕು ಎಂದರು.

ಕಲುಷಿತ ನೀರು ಪೂರೈಸಿದರೆ ಕ್ರಮ
ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರಿನಿಂದ ಯಾವುದೇ ತೊಂದರೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಜವಾಬ್ದಾರಿ ಮಾಡಲಾಗುವುದು ಸಿದ್ದರಾಮಯ್ಯ ಎಚ್ಚರಿಸಿದರು. ತುಕ್ಕು ಹಿಡಿದ ಹಳೆಯ ಪೈಪ್‌ ಬದಲಾವಣೆ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಮೂಲದಲ್ಲಿ ಹಾಗೂ ವಿತರಣಾ ಬಿಂದುವಿನಲ್ಲಿನ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು. ಗುಣಮಟ್ಟ ಸರಿಯಿಲ್ಲದಿದ್ದರೆ ಹೊಸ ಮೂಲದಿಂದ ನೀರು ಪೂರೈಕೆ ಮಾಡಬೇಕು.

Advertisement

ರಾಜ್ಯದ 55 ಕಡೆಗಳಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗನೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯಾರಂಭಿಸುವ ಮೂಲಕ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬೇಕು. ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ನಿರ್ದೇಶಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಸ್ಥಳ ಗುರುತಿಸಿ
ಈಗಾಗಲೇ ಅನುಮತಿ ನೀಡಲಾಗಿರುವ ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಆದಷ್ಟು ಬೇಗನೆ ಜಾಗ ಗುರುತಿಸಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70 ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗನೆ ಸ್ಥಳ ಗುರುತಿಸಬೇಕು. ಹೊಸ ಮೆನು ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಸಿಎಂ ಸೂಚಿಸಿದರು.


ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಮುಖ್ಯಮಂತ್ರಿ ಜನಸ್ಪಂದನ ಸಭೆ

ಬೆಂಗಳೂರು: ಮುಂದಿನ ತಿಂಗಳು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ವನ್ನು ಕಲಬುರಗಿ ಜಿಲ್ಲೆಯಲ್ಲಿ ನಡೆಸುವು ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಗಳ ಸಭೆಯಲ್ಲಿ ಪ್ರಕಟಿಸಿದ್ದಾರೆ. ಜನಸ್ಪಂದನ ಕಾರ್ಯ ಕ್ರಮವನ್ನು ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಬೇಕು. ಅಧಿವೇಶನ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇ ಮಾಡಬೇಕು ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next