Advertisement

ದೇಶದಲ್ಲೇ ಕರ್ನಾಟಕ ಸರಕಾರ ಕಡು ಭ್ರಷ್ಟ: ರಾಹುಲ್‌ ಗಾಂಧಿ

10:02 PM Oct 10, 2022 | Team Udayavani |

ಚಿತ್ರದುರ್ಗ: ಇಡೀ ದೇಶದಲ್ಲೇ ಭ್ರಷ್ಟಾಚಾರದಿಂದ ಕೂಡಿದ ಸರಕಾರ ಇದ್ದರೆ ಅದು ಕರ್ನಾಟಕದ ಬಿಜೆಪಿ ನೇತೃತ್ವದ ಸರಕಾರ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದರು.

Advertisement

ಭಾರತ್‌ ಜೋಡೋ ಯಾತ್ರೆ ವೇಳೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳು ಅನುಮತಿ ಪಡೆಯಲು ಶೇ.40 ಕಮಿಷನ್‌ ನೀಡಬೇಕಾದ ಸ್ಥಿತಿ ಇದೆ. ಪಿಎಸ್‌ಐ ಹುದ್ದೆಗೆ 80 ಲಕ್ಷ ರೂ. ನೀಡಬೇಕಾಗಿದೆ. ಸಹಾಯಕ ಪ್ರಾಧ್ಯಾಪಕರು, ಎಂಜಿನಿಯರ್‌ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗದಿಂದ ಎಲ್ಲ ವರ್ಗದ ಜನತೆ ಬೇಸತ್ತಿದ್ದಾರೆ ಎಂದರು.

ಈ ಯಾತ್ರೆ ಮೂಲಕ ಬಿಜೆಪಿಗೆ ಸಂದೇಶ ನೀಡುತ್ತಿದ್ದೇವೆ. ಏಕತೆಯಿಂದ ಕೂಡಿರುವ ಭಾರತವನ್ನು ಯಾರಿಂದಲೂ ವಿಭಜಿಸಲು ಸಾಧ್ಯವಿಲ್ಲ. ದೇಶದ ಐತಿಹಾಸಿಕ ನಾಯಕರಾದ ಬಸವಣ್ಣ, ಅಂಬೇಡ್ಕರ್‌, ನಾರಾಯಣ ಗುರು ಅವರೆಲ್ಲರೂ ಏಕತೆಗಾಗಿ ಹೋರಾಟ ಮಾಡಿದ್ದಾರೆ. ಅಸಹಿಷ್ಣುತೆ ಹಾಗೂ ನಿರುದ್ಯೋಗ ಸಮಸ್ಯೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ಎರಡು ಸಂದೇಶಗಳನ್ನು ಈ ಯಾತ್ರೆಯಲ್ಲಿ ನೀಡುತ್ತಿದ್ದೇವೆ ಎಂದರು.

ಮೀಸಲಾತಿಗೆ ಸಮಿತಿ ರಚಿಸಿದ್ದು ಕಾಂಗ್ರೆಸ್‌
ಕರ್ನಾಟಕದಲ್ಲಿ ಸರಕಾರ ಪರಿಶಿಷ್ಟ ಪಂಗಡಕ್ಕೆ ಶೇ. 7ರಷ್ಟು ಮೀಸಲಾತಿ ನೀಡುವ ಘೋಷಣೆ ಮಾಡಿದೆ. ಆದರೆ ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನ್ಯಾ| ನಾಗಮೋಹನದಾಸ್‌ ಸಮಿತಿ ರಚಿಸಲಾಗಿತ್ತು. ಕಳೆದ ಎರಡೂವರೆ ವರ್ಷಗಳಿಂದ ಏನೂ ಮಾಡದೇ ಸುಮ್ಮನಿದ್ದ ಸರಕಾರ ಈಗ ಮೀಸಲಾತಿ ನೀಡಲು ಮುಂದಾಗಿದೆ ಎಂದರು.

ಮಳೆಯಲ್ಲೇ ಹೆಜ್ಜೆ ಹಾಕಿದ ರಾಹುಲ್‌
ಯಾತ್ರೆ ಆರಂಭಕ್ಕೆ ಒಂದು ಗಂಟೆ ಮೊದಲು ಮಳೆಯ ಸಿಂಚನವಾಯಿತು. ಸಂಜೆ 4 ಗಂಟೆ ವೇಳೆಗೆ ಪಾದಯಾತ್ರೆ ಆರಂಭವಾದ ಬಳಿಕವೂ ಜೋರಾಗಿ ಮಳೆ ಸುರಿಯಿತು. ಮಳೆಯಲ್ಲೂ ಯಾತ್ರೆ ನಿಲ್ಲಿಸದೆ ರಾಹುಲ್‌ ಹೆಜ್ಜೆ ಹಾಕಿದರು. ರಾಹುಲ್‌ ಗಾಂಧಿ ಜತೆಗಿದ್ದವರು ಕೂಡ ಮಳೆಯಲ್ಲೇ ಸಾಗಿದರು.

Advertisement

ಖಾರಾ ಮಂಡಕ್ಕಿ-ಕಾಫಿ ಸವಿದ ರಾಹುಲ್‌
ಹಿರಿಯೂರಿನಿಂದ ಹರ್ತಿಕೋಟೆ ಗ್ರಾಮದತ್ತ ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆ ಸಾಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಹೇಮದಳ ಗ್ರಾಮದ ಬಳಿ ಹೊಟೇಲ್‌ಗೆ ರಾಹುಲ್‌ ಭೇಟಿ ನೀಡಿದ್ದರು. ಅಲ್ಲಿ ಖಾರಾ ಮಂಡಕ್ಕಿ, ಸ್ಯಾಂಡ್‌ವಿಚ್‌, ಕಾಫಿ ಸವಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸಾಥ್‌ ನೀಡಿದರು.

ಕಲ್ಪತರು ನಾಡಿನಲ್ಲಿ ಯಾತ್ರೆ ಸಂಚಲನ
ಹುಳಿಯಾರು: ಭಾರತ್‌ ಜೋಡೋ ಯಾತ್ರೆ ಸೋಮವಾರ ತುಮಕೂರು ಜಿಲ್ಲೆಯ ತುರುವೇಕೆರೆ, ತಿಪಟೂರಿನಲ್ಲಿ ಯಶಸ್ವಿಯಾಯಿತು. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು ಪ್ರವೇಶಿಸಿದ ಬಳಿಕ ಕಳೆಗುಂದಿತು. ಸ್ಥಳೀಯ ಕಾರ್ಯಕರ್ತರ ಸ್ಪಂದನೆಯಿಲ್ಲದೆ ನೆರೆಯ ತಾಲೂಕಿನ ಕಾರ್ಯಕರ್ತರನ್ನು ಅವಲಂಬಿಸುವಂತಾಯಿತು. ಇಲ್ಲಿ ಯಾತ್ರೆ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್‌ ನಾಯಕರು ಕಾರಿನಲ್ಲಿ ಚಿತ್ರದುರ್ಗದ ಹಿರಿಯೂರಿನತ್ತ ತೆರಳಿದರು. ಹಿರಿಯೂರಿಗೆ ತೆರಳುವ ಮಾರ್ಗಮಧ್ಯೆ ಅರಣ್ಯ ಪ್ರದೇಶ ಇರುವುದರಿಂದ ಭದ್ರತಾ ದೃಷ್ಟಿಯಿಂದ ಕಾರಿನಲ್ಲಿ ತೆರಳುವಂತೆ ಪೊಲೀಸ್‌ ಇಲಾಖೆಯ ಮನವಿ ಮೇರೆಗೆ ಕಾಂಗ್ರೆಸ್‌ ನಾಯಕರು ಕೆಂಕೆರೆ ಸಮೀಪದ ಬಸವನಗುಡಿ ಬಳಿ ಪಾದಯಾತ್ರೆ ಮುಕ್ತಾಯಗೊಳಿಸಿ ಕಾರಿನಲ್ಲಿ ಹಿರಿಯೂರಿಗೆ ತೆರಳಿದರು.

ಡಿಕೆಶಿ ಜತೆ ಓಡು ಹೆಜ್ಜೆ ಹಾಕಿದ
ಮೈಸೂರಿನ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರ ಕೈ ಹಿಡಿದು ಒಂದಷ್ಟು ದೂರ ರನ್ನಿಂಗ್‌ ಮಾಡುವ ಮೂಲಕ ಕಾರ್ಯಕರ್ತರ ಹುರುಪು ಹೆಚ್ಚಿಸಿದ ರಾಹುಲ್‌, ಕೆಂಕೆರೆ ಬಳಿ ಪುರದಮಠದ ಬಳಿ ಡಿಕೆಶಿ ಜತೆ ರನ್ನಿಂಗ್‌ ಮಾಡಿ ಗಮನ ಸೆಳೆದರು. ಹುಳಿಯಾರಿನ ಕನಕ ಸರ್ಕಲ್‌ ಬಳಿ ತಾಂಡದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಸಾಂಪ್ರದಾಯಕ ನೃತ್ಯ ಮಾಡಿ ಗಮನ ಸೆಳೆದರು. ರಾಹುಲ್‌ಗಾಂಧಿ ಮಹಿಳೆಯರನ್ನು ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಮಂಗಳಮುಖೀಯರೊಂದಿಗೆ ಮಾತುಕತೆ ಮಾಡಿಕೊಂಡೇ ರಾಹುಲ್‌ ಹೆಜ್ಜೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next