Advertisement

ಎರಡು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಖರೀದಿ: ಡಿಸಿಎಂ ಮಾಹಿತಿ

09:02 AM Apr 17, 2020 | Hari Prasad |

ಬೆಂಗಳೂರು: ಕೋವಿಡ್ ಪತ್ತೆಗಾಗಿ ಹೆಚ್ಚುವರಿಯಾಗಿ ಎರಡು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಖರೀದಿಸಲು ಗುರುವಾರ ಇಲ್ಲಿ ನಡೆದ ಕೋವಿಡ್ ಕುರಿತ ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisement

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

‘ಚೀನಾ ಸರ್ಕಾರ ಪಟ್ಟಿ ಮಾಡಿರುವ ಅಧಿಕೃತ ಸಂಸ್ಥೆಗೇ ಟೆಸ್ಟ್ ಕಿಟ್‍ಗಳನ್ನು ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿದ್ದು, ಅವು ಬಂದ ನಂತರ ಟೆಸ್ಟ್ ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು’ ಎಂದು ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

‘ಕೋವಿಡ್ ರೋಗ ಲಕ್ಷಣಗಳು ಇರುವ ವ್ಯಕ್ತಿಯ ಕಫ ಮಾದರಿಗಳನ್ನು ಸಂಗ್ರಹಿಸಲು ರಾಜ್ಯದಲ್ಲಿ 250 ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗುವುದು. ಇಂತಹ ಕಿಯೋಸ್ಕ್ ಗಳು ತಾಲ್ಲೂಕಿಗೆ ಒಂದರಂತೆ ಆರಂಭಿಸಲಾಗುವುದು. ಈ ಮೂಲಕ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಿ, ರೋಗ ಹರಡುವುದನ್ನು ತಡೆಯಲಾಗುವುದು’ ಎಂದು ಅವರು ವಿವರಿಸಿದರು.

‘ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಿರಲು ಹಾಗೂ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿಕೊಳ್ಳುವಂತೆ ಸೂಚಿಸಲು ತೀರ್ಮಾನಿಸಲಾಗಿದೆ. ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯ ಮಾಡಿದ್ದು, ಇದನ್ನು ಸ್ಥಳೀಯ ಮಟ್ಟದಲ್ಲಿ ಮುಸ್ಲಿಂ ಧರ್ಮಗುರುಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲು ಸಲಹೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

Advertisement

‘ವೈದ್ಯರ ರಕ್ಷಣಾ ಕವಚಗಳು (ಪಿಪಿಇ) ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅಗತ್ಯ ಇರುವ 25 ಸಾವಿರ ಆರ್.ಟಿ.ಪಿ.ಸಿ.ಆರ್. ಕಿಟ್‍ಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಗಳಲ್ಲಿ ಕನಿಷ್ಠ 50 ರಿಂದ 100 ಹಾಸಿಗೆಗಳಿಗೆ ಕೇಂದ್ರಿಕೃತ ಆಮ್ಲಜನಕ ಸರಬರಾಜು ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಯಿತು ಎಂದರು. ರಕ್ತ/ಕಫ ಮಾದರಿಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಡಾ.ಸುದರ್ಶನ ನೇತೃತ್ವದ ವೈದ್ಯರ ತಂಡ ಕೊಟ್ಟಿರುವ ವರದಿಯನ್ನು ಅಂಗೀಕರಿಸಲಾಯಿತು.

ಕೋವಿಡ್ ರೋಗಿಗಳಿಗೆ ಸರ್ಕಾರ ನಿಗದಿಪಡಿಸಿರುವ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಬೇಕು. ಕೆ.ಸಿ.ಜನರಲ್ ಸೇರಿದಂತೆ ಬೇರೆ ಮಾಮೂಲಿ ರೋಗಿಗಳು ಹೋಗುವ ಕಡೆಗೆ ಚಿಕಿತ್ಸೆ ನೀಡಬಾರದು ಎನ್ನುವ ತೀರ್ಮಾನವನ್ನೂ ಸಭೆಯಲ್ಲಿ ಮಾಡಲಾಯಿತು.

ಸಹಾಯವಾಣಿ:
ಕೋವಿಡ್ ಸಲುವಾಗಿಯೆ ಪ್ರತ್ಯೇಕ ಸಹಾಯವಾಣಿ ತೆರೆಯಲಾಗುವುದು. ಕನಿಷ್ಟ 300 ಜನರು, 50 ಸಾವಿರ ಕರೆಗಳನ್ನು ಸ್ವೀಕರಿಸಲಿದ್ದಾರೆ ಎಂಬ ಮಾಹಿತಿಯನ್ನೂ ಸಹ ಉಪಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ನೀಡಿದರು.

ಟ್ರೇಸಿಂಗ್ ಪೂರ್ಣ:
ದೆಹಲಿಯ ತಬ್ಲೀಗಿ ಜಮಾತ್ ಮತ್ತು ನಂಜನಗೂಡಿನ ಜೂಬಿಲಿಯಂಟ್ ಕಾರ್ಖಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಟ್ರೇಸಿಂಗ್ ಪೂರ್ಣವಾಗಿದ್ದು, ಪಾಸಿಟಿವ್ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next