Advertisement

Karnataka Government: ಪಂಚಾಯತ್‌ ಅಧ್ಯಕ್ಷರ ಅಧಿಕಾರ ಹೆಚ್ಚಳಕ್ಕೆ ಯತ್ನ

02:13 AM Aug 01, 2024 | Team Udayavani |

ಕುಂದಾಪುರ: ಪಂಚಾಯತ್‌ ಅಧ್ಯಕ್ಷರ ಅಧಿಕಾರ ಮೊಟಕು ಸಂಬಂಧ ಸಚಿವರು ಹಾಗೂ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತದ ಕಾರಣದಿಂದ ಹಿಂದಿನ ಸರಕಾರದ ಅವಧಿಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಈ ಬಗ್ಗೆ ನಮ್ಮ ಸರಕಾರ ಈ ಬಗ್ಗೆ ಮರುಪರಿಶೀಲಿಸಿ ಸಾಧ್ಯಾಸಾಧ್ಯತೆಗಳ ವಿಮರ್ಶೆ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದರು.

Advertisement

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇಕಾಬಿಟ್ಟಿ ನೇಮಕಾತಿಗಳು ನಡೆದ ಕಾರಣ ಈ ಅಧಿಕಾರ ಜಿ.ಪಂ.ಸಿಇಒಗೆ ನೀಡಲಾಗಿದೆ. ಹಣ ದುರ್ಬಳಕೆ ಆದ ಕಾರಣ ಚೆಕ್‌ಗೆ ಸಹಿ ಹಾಕುವ ಅಧಿಕಾರ ಹಿಂಪಡೆಯಲಾಗಿದೆ. ಇಲ್ಲಿ ಅಧಿಕಾರ ಕಿತ್ತು ಕೊಳ್ಳುವ ವಿಚಾರ ಬರುವುದಿಲ್ಲ ಎಂದರು.

ಅಧಿಕಾರಿಗಳ ವರ್ಗಾವಣೆ ದಂಧೆಯಾಗುತ್ತಿದೆ ಎಂಬ ಆರೋಪದ ಕುರಿತು ಅವಧಿ ಮುಗಿದ ಸಿಬಂದಿ, ಅಧಿಕಾರಿಗಳ ವರ್ಗಾವಣೆ ಎಲ್ಲ ಸರಕಾರ ಗಳಲ್ಲೂ ನಡೆಯುತ್ತಿದೆ. ಕೊಲ್ಲೂರು ಆಡಳಿತ ಮಂಡಳಿ ನೇಮಕ ಕುರಿತು ಸಂಬಂಧ ಪಟ್ಟವರಿಗೆ ಇಲ್ಲಿನವರ ಅಭಿಪ್ರಾಯಗಳನ್ನು ತಲುಪಿಸಲಾಗಿದೆ ಎಂದರು. ಗಂಗೊಳ್ಳಿ ಜೆಟ್ಟಿ, ಮರವಂತೆ, ಕೊಡೇರಿ ಬಂದರು ಉಪಯೋಗಕ್ಕಿಲ್ಲದಂತಾಗಿದೆ ಎಂಬ ಪ್ರಶ್ನೆಗೆ‌, ಸಚಿವ ಮಂಕಾಳ ವೈದ್ಯರಿಗೆ ಸಭೆ ನಡೆಸಲು ಪಕ್ಷದ ಕಾರ್ಯಾಧ್ಯಕ್ಷನಾಗಿ ಸೂಚಿಸುತ್ತೇನೆ ಎಂದರು.

ಉದಯವಾಣಿಗೆ ಅಭಿನಂದನೆ
ಕುಂದಾಪುರ ಭಾಗಕ್ಕೆ ಮೆಡಿಕಲ್‌ ಕಾಲೇಜು, ಉಡುಪಿ ಜಿಲ್ಲೆಯಲ್ಲಿ ಎಂಒ4 ಭತ್ತದ ಬೀಜದ ಕೊರತೆ, ಕಾಲು ಸಂಕ ಬೇಕು ಎಂಬಂತಹ “ಉದಯವಾಣಿ’ ವರದಿಗಳನ್ನು ಸದನದಲ್ಲಿ ಪ್ರಶ್ನಿಸಿ, ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಪತ್ರ ಬರೆದಿದ್ದೇನೆ. ಈ ವರದಿಗಳ ಮೂಲಕ ಸಮಸ್ಯೆ ಗಮನಕ್ಕೆ ತಂದದ್ದಕ್ಕಾಗಿ ಪತ್ರಿಕೆಗೆ ಅಭಿನಂದನೆಗಳು ಎಂದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ವಿವಿಧ ಬ್ಲಾಕ್‌ ಅಧ್ಯಕ್ಷರು ಸಹಿತ ಪ್ರಮುಖರಿದ್ದರು.

ಪಡುಬಿದ್ರಿ ಬೀಚ್‌ಗೆ 17 ಕೋ. ರೂ. ಪ್ರಸ್ತಾವ: ಭಂಡಾರಿ
ಪಡುಬಿದ್ರಿ: ನಡಿಪಟ್ಣ ವಿಷ್ಣು ಭಜನ ಮಂದಿರದ ಬಳಿಯ ಕಡಲ್ಕೊರೆತ ಪ್ರದೇಶಕ್ಕೆ ಬುಧವಾರ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಭೇಟಿಯಿತ್ತರು. ಕಡಲ್ಕೊರೆತದಿಂದ ರಕ್ಷಿಸಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ವತಿಯಿಂದ 17 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

Advertisement

ಬ್ಲೂ ಫ್ಲ್ಯಾಗ್‌ ಬೀಚ್‌ಗೆ ಪ್ರವೇಶವಿಲ್ಲ
ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್‌ ಬೀಚ್‌ಗೆ ಪ್ರವೇಶ ನಿರ್ಬಂಧವನ್ನು ಮುಂದಿನ ಎರಡು ದಿನಗಳಿಗೆ ವಿಸ್ತರಿಸಲಾಗಿದೆ.

ಸೋಮೇಶ್ವರ ಗುಡ್ಡ ಕುಸಿತ: ಮಂಜುನಾಥ ಭಂಡಾರಿ ಭೇಟಿ
ಬೈಂದೂರು: ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡ ಕುಸಿತ ಸ್ಥಳಕ್ಕೆ ಮಂಜುನಾಥ ಭಂಡಾರಿ ಬುಧವಾರ ಭೇಟಿ ನೀಡಿದರು. ಬೈಂದೂರು ಪ. ಪಂ.ಮುಖ್ಯಾಧಿಕಾರಿ ಅಜಯ್‌ ಭಂಡಾರ್ಕರ್‌, ಉಡುಪಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ, ವಂಡ್ಸೆ ಬ್ಲಾಕ್‌ ಅಧ್ಯಕ್ಷ ಪ್ರದೀಪ್‌ ಕೆ.ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್‌ ಅಧ್ಯಕ್ಷ ಅರವಿಂದ ಪೂಜಾರಿ ಮುಂತಾದವರಿದ್ದರು.

ಉಡುಪಿ ಜಿಲ್ಲೆಗೆ 100 ಕೋ.ರೂ. ನಷ್ಟ
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾಗಿ 100 ಕೋ.ರೂ. ನಷ್ಟವಾಗಿದ್ದು ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಮಾತನಾಡಿ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಯತ್ನಿಸುವುದಾಗಿ ಮಂಜುನಾಥ ಭಂಡಾರಿ ಹೇಳಿದರು. ಸೋಮೇಶ್ವರ ಗುಡ್ಡ ಕುಸಿತ ಸ್ವಯಂಕೃತ ಅಪರಾಧ. ಇಲ್ಲಿಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next