ಸೋಮವಾರ ಆರಂಭಗೊಳ್ಳಲಿರುವ ಅಭಿಯಾನದಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ನರೇಗಾದಡಿಯಲ್ಲಿ ನಿರಂತರವಾಗಿ ಗ್ರಾಮೀಣ ಭಾಗದವರಿಗೆ ಕೆಲಸವನ್ನು ಒದಗಿಸಿಕೊಡುವ ಕಾರ್ಯ ಆಗಲಿದೆ. ಕೆಲಸರಹಿತರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸ ದೊರಕಿಸಿಕೊಡುವ ಉದ್ದೇಶದಿಂದ ಆರಂಭಗೊಂಡ ನರೇಗಾ ಯೋಜನೆಯಿಂದಲೂ ಹೊರಗುಳಿದಿರುವ ಗ್ರಾಮಸ್ಥರನ್ನು ಈ ಅಭಿಯಾನದಡಿ ತಂದು ಅವರನ್ನು ಕ್ರಿಯಾಶೀಲರನ್ನಾಗಿಸುವ ಮತ್ತು ಆ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗುವ ಇರಾದೆ ಸರಕಾರದ್ದಾಗಿದೆ.
Advertisement
ಮೊದಲ ಹಂತದಲ್ಲಿ ಅಭಿಯಾನದ ಕುರಿತಾಗಿ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಆ ಬಳಿಕ ಉದ್ಯೋಗ ಚೀಟಿ ವಿತರಣೆ, ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರ ಹೆಸರು ನೋಂದಣಿ ಮತ್ತು ಇದಾದ ಎರಡೇ ದಿನಗಳಲ್ಲಿ ಅವರಿಗೆ ಕೆಲಸ ನೀಡಲು ನಿರ್ಧರಿಸಲಾಗಿದೆ. ಇವೆಲ್ಲದರ ಜತೆಯಲ್ಲಿ ಕೆಲಸದಾಳುಗಳ ಹಿತರಕ್ಷಣೆಯ ನಿಟ್ಟಿನಲ್ಲಿಯೂ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ಬಾರಿ ಕೊರೊನಾದಿಂದಾಗಿ ಭಾರೀ ಸಂಖ್ಯೆಯಲ್ಲಿ ಜನರು ನಗರಗಳಿಂದ ತಮ್ಮ ಹುಟ್ಟೂರಿನತ್ತ ವಾಪಸಾಗಿದ್ದರು. ಕೆಲಸದ ನಿಮಿತ್ತ ಪರ ರಾಜ್ಯ, ನಗರ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದವರು ತಾಯ್ನಾಡಿಗೆ ಹರಸಾಹಸಪಟ್ಟು ಮರಳಿದ್ದರು. ಇವರೆಲ್ಲರಿಗೂ ಕೆಲಸ ಕಲ್ಪಿಸಿಕೊಡುವುದು ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಬಲುದೊಡ್ಡ ಸವಾಲಿನ ಕಾರ್ಯವಾಗಿತ್ತು. ಆದರೆ ಸೋಂಕು ವ್ಯಾಪಿಸಲಾರಂಭಿಸುತ್ತಿದ್ದಂತೆಯೇ ಮಳೆಗಾಲ ಆರಂಭಗೊಂಡಿದ್ದರಿಂದ ಗ್ರಾಮೀಣ ಪ್ರದೇಶಗಳ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸರಕಾರದ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದರು. ಇದೀಗ ಮತ್ತೆ ಬೇಸಗೆ ಬಂದಿದೆ. ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಈಗಾಗಲೇ ನೀರಿನ ಅಭಾವ ಕಾಣಿಸಿಕೊಳ್ಳಲಾರಂಭಿಸಿದೆ. ಜನರು ಕೆಲಸವಿಲ್ಲದೆ ಜೀವನ ಸಾಗಿಸಲು ಅಲೆದಾಡುವ ಪರಿಸ್ಥಿತಿ ನಿರ್ಮಾ ಣಗೊಂಡಿದೆ. ಇದರಿಂದ ಬಚಾವಾಗಲು ಅವರು ನಗರಗಳತ್ತ ಗುಳೆ ಹೊರಡಲು ಅನುವಾಗಿದ್ದಾರೆ. ಮತ್ತೂಂದೆಡೆಯಿಂದ ಕೊರೊನಾ ಸಾಂಕ್ರಾ ಮಿಕದ ಭೀತಿ ಇನ್ನೂ ದೂರವಾಗಿಲ್ಲ. ಇಂತಹ ಕಾಲಘಟ್ಟದಲ್ಲಿ ಹಳ್ಳಿಗರು ನಗರಗಳಿಗೆ ವಲಸೆ ಹೋಗಿ ಮತ್ತೆ ಪರಿಸ್ಥಿತಿ ಬಿಗಡಾಯಿಸುವ ಆತಂಕವೂ ಇದೆ. ಈ ಎಲ್ಲ ಕಾರಣಗಳಿಂದಾಗಿ ಈ ಯೋಜನೆ ಸಮುಚಿತವಾದುದೇ.