Advertisement

ಮಾರ್ಗ ಬದಲಿಸಿದ ನೌಕರರು: ಮುರಿದುಬಿದ್ದ ಸಂಧಾನ? ಬಸ್‌ ಬಂದ್‌ ಮತ್ತೆ ಮುಂದುವರಿಕೆ

01:49 AM Dec 14, 2020 | sudhir |

ಬೆಂಗಳೂರು: ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬದಿಗೊತ್ತಿ ಸರಕಾರದ “ಸಂಧಾನ’ಕ್ಕೆ ಸಹಮತ ವ್ಯಕ್ತಪಡಿಸಿದ್ದ ಸಾರಿಗೆ ನೌಕರರ ಸಂಘದ ಮುಖಂಡರು, ಕೊನೆಯ ಕ್ಷಣದಲ್ಲಿ “ಯೂ-ಟರ್ನ್’ ಹೊಡೆದಿದ್ದಾರೆ. ಇದರೊಂದಿಗೆ ಸರಕಾರ-ಸಾರಿಗೆ ನೌಕರರ ನಡುವಿನ ಸಂಘರ್ಷ ಸೋಮವಾರ ಕೂಡ ಮುಂದುವರಿಯುವ ಲಕ್ಷಣಗಳಿವೆೆ.

Advertisement

ಸರಕಾರವು ಮುಷ್ಕರನಿರತ ನೌಕರರ ಮುಖಂಡರನ್ನು ರವಿವಾರ ಮಾತುಕತೆಗೆ ಆಹ್ವಾನಿಸಿತ್ತು. ಮಾತುಕತೆ ಬಹುತೇಕ “ಫ‌ಲಪ್ರದ’ವಾಗಿದೆ ಎಂದು ಸರಕಾರ ಮತ್ತು ರಾಜ್ಯ ಸಾರಿಗೆ ನೌಕರರ ಕೂಟ ಇಬ್ಬರೂ ಪ್ರಕಟಿಸಿದ್ದರು.

ಸಭೆಯ ಅನಂತರ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳುತ್ತಿದ್ದಂತೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮುಖಂಡರ ಹೇಳಿಕೆ ಬದಲಾಯಿತು. ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ (ಚಂದ್ರು), “ಸರಕಾರದೊಂದಿಗೆ ಸಂಧಾನ ವಿಫ‌ಲವಾಗಿದೆ. ಯಾರೂ ಕರ್ತವ್ಯಕ್ಕೆ ತೆರಳುವುದು ಬೇಡ’ ಎಂದು ಘೋಷಿಸಿದರು. ಇದಕ್ಕೆ ದನಿಗೂಡಿಸಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, “ಸಂಧಾನ ಅಪೂರ್ಣ ವಾಗಿದೆ. ಎಲ್ಲ ಬೇಡಿಕೆಗಳಿಗೂ ಸರಕಾರ ಸ್ಪಂದಿಸಿಲ್ಲ. ಆದ್ದರಿಂದ ಸೋಮವಾರ ಕೂಡ ಮುಷ್ಕರ ಮುಂದುವರಿಯಲಿದೆ’ ಎಂದರು.

ಮುಷ್ಕರನಿರತರು ಉಲ್ಟಾ ಹೊಡೆದ ಬೆನ್ನಲ್ಲೇ ಸಚಿವರಾದ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌, ಗೋವಿಂದ ಕಾರಜೋಳ ಮತ್ತು ಅಧಿಕಾರಿಗಳು ಸಿಎಂ ನಿವಾಸ “ಕಾವೇರಿ’ಗೆ ದೌಡಾಯಿಸಿದರು. ಅಲ್ಲಿ ತುರ್ತು ಸಭೆ ನಡೆಸಿದ ಅನಂತರ ಕೋಡಿಹಳ್ಳಿ ಚಂದ್ರ ಶೇಖರ್‌ ವಿರುದ್ಧ ಹರಿಹಾಯ್ದರು.

ಇಡೀ ಬೆಳವಣಿಗೆ ಮುಷ್ಕರನಿರತರಲ್ಲಿ ಗೊಂದಲ ಉಂಟು ಮಾಡಿತು. ಕೆಲವರು ಕರ್ತವ್ಯಕ್ಕೆ ತೆರಳುತ್ತಿದ್ದರು. ಕೆಲವು ಪ್ರಯಾಣಿಕರು ಅಲ್ಲಲ್ಲಿ ನಿಲ್ದಾಣಗಳತ್ತ ಬರಲಾ ರಂಭಿಸಿದರು. ಅಷ್ಟರಲ್ಲಿ ವ್ಯತಿರಿಕ್ತ ಹೇಳಿಕೆಗಳು ಮಾಧ್ಯಮ ಗಳಲ್ಲಿ ಪ್ರಸಾರವಾಗಲು ಆರಂಭವಾದವು. ಇದರಿಂದ ಪ್ರಯಾಣ ಮೊಟಕುಗೊಳಿಸಿದರು.

Advertisement

ಇದಕ್ಕೂ ಮುನ್ನ ವಿಕಾಸಸೌಧದಲ್ಲಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ರವಿವಾರ ಇಡೀ ದಿನ ಸಚಿವರು ಸರಣಿ ಸಭೆಗಳನ್ನು ನಡೆಸಿದರು. ಕೊನೆಯಲ್ಲಿ ಸರಕಾರದ ಎಲ್ಲ ಕಸರತ್ತು ಮುಷ್ಕರನಿರತರ ಒಂದು ಹೇಳಿಕೆಯಿಂದ ವ್ಯರ್ಥವಾಯಿತು.

ಖಾಸಗಿ ಬಸ್‌ ಮಾಲಕರ ನೈತಿಕ ಬೆಂಬಲ
ಮುಷ್ಕರಕ್ಕೆ ಖಾಸಗಿ ಬಸ್‌ ಮಾಲಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದರೂ ಜನರ ಹಿತದೃಷ್ಟಿಯಿಂದ ಎಂದಿನಂತೆ ಖಾಸಗಿ ಬಸ್‌ಗಳು ಕಾರ್ಯಾಚರಿಸಲಿವೆ. ಖಾಸಗಿ ಮಜಲು ವಾಹನಗಳು, ಖಾಸಗಿ ಸೇವಾ ವಾಹನಗಳು ಸೋಮವಾರ ಎಂದಿನಂತೆ ಕಾರ್ಯಾಚರಿಸಲಿವೆ ಎಂದು ಖಾಸಗಿ ಬಸ್‌ ಮಾಲಕರ ಸಂಘಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಖಾಸಗಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ನಟರಾಜ್‌ ಶರ್ಮ, ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳು ಸಂಚರಿಸಲಿವೆ ಎಂದರು.

ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಭೆ
ಮುಷ್ಕರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರಕ ಸಾರಿಗೆ ಕ್ರಮ ಕೈಗೊಳ್ಳುವುದಕ್ಕಾಗಿ ಜಿಲ್ಲಾಡಳಿತ ಸೋಮವಾರ ಸಭೆ ಆಯೋಜಿಸಿದೆ. ಸರಕಾರಿ ನೌಕರರ ಮುಷ್ಕರಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳ ಖಾಸಗಿ ಬಸ್‌ ಮಾಲಕರು ಬೆಂಬಲ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next