ಬೆಂಗಳೂರು : ವಿದ್ಯುತ್ ಕಣ್ಣಾಮುಚ್ಚಾಲೆ ವಿರುದ್ಧ ರೈತರ ಆಕ್ರೋಶಕ್ಕೆ ಮಣಿದ ಸರಕಾರವು ಕೃಷಿ ಪಂಪ್ ಸೆಟ್‌ಗಳಿಗೆ ನಿತ್ಯ ಮೂರು ಪಾಳಿಗಳಲ್ಲಿ ತಲಾ ಐದು ತಾಸು ವಿದ್ಯುತ್ ಪೂರೈಸಲು ನಿರ್ಧರಿಸಿದೆ. ಇದು ಸಮರ್ಪಕವಾಗಿ ಪಾಲನೆಯಾದರೆ ಮಳೆ ಇಲ್ಲದೆ ಕಂಗೆಟ್ಟ ರೈತರು ತುಸು ನಿಟ್ಟುಸಿರು ಬಿಡುವಂತಾಗಲಿದೆ.
ಅನಿಯಮಿತ ಲೋಡ್ ಶೆಡ್ಡಿಂಗ್ ಮತ್ತು ಅದನ್ನು ಪ್ರತಿಭಟಿಸಿ ರೈತರ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆ ನಡೆಸಿ ನಿತ್ಯ ಕನಿಷ್ಠ 5 ತಾಸು ವಿದ್ಯುತ್ ನೀಡಲು ಸ್ಪಷ್ಟ ಸೂಚನೆ ನೀಡಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಿತ್ಯ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಐದು ತಾಸುಗಳಂತೆ ಎರಡು ಪಾಳಿ, ಮತ್ತೂಂದು ಬಾರಿ ರಾತ್ರಿ ಪಾಳಿಯಲ್ಲಿ ರೈತರಿಗೆ ಗುಣಮಟ್ಟದ ವಿದ್ಯುತ್ ನಿರಂತರವಾಗಿ ಪೂರೈಕೆ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಭೆಯ ತೀರ್ಮಾನಗಳ ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಬೇಕು ಎಂದು ಸೂಚಿಸಿದರು. ಈ ಸಂಬಂಧ ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರುಗಳು ಈ ಕುರಿತು ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ಮುಖ್ಯ ಎಂಜಿನಿಯರ್‌ಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರು ಕೂಡ ಈ ಬಗ್ಗೆ ಮೇಲಿನ ಹಂತದ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದೂ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ಇದನ್ನೂ ಓದಿ: Kittur Chennamma: ಚದುರಿದ ಚಿತ್ರಗಳಂತಾದ ಕಿತ್ತೂರು ರಾಣಿ ಚನ್ನಮ್ಮ ವಂಶಸ್ಥರು