ಬೆಂಗಳೂರು: ಕರ್ನಾಟಕದ ಮೀನು ಖರೀದಿ ನಿಷೇಧಿಸಿರುವ ಗೋವಾ ಸರಕಾರದ ತೀರ್ಮಾನದಿಂದ ಆಗಿರುವ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಬಗೆಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು. ನಗರದ ಕೆಪಿಸಿಸಿ ಕಚೇರಿಯಲ್ಲಿ ರವಿವಾರ ನಡೆದ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಲಿಂಗರಾಜು ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮೀನು ಖರೀದಿಯನ್ನು ನಿಷೇಧಿಸಿರುವ ಗೋವಾ ಸರಕಾರದ ತೀರ್ಮಾನ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಈ ಸಂಬಂಧ ಈಗಾಗಲೇ ಗೋವಾ ಸರಕಾರ ಮತ್ತು ಗೋವಾದ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಯಾವುದೇ ಸರಕಾರ ಅಂತಾರಾಜ್ಯ ವ್ಯಾಪಾರದ ಮೇಲೆ ನಿಷೇಧ ಹೇರುವುದು ಸರಿಯಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಪ್ರಾತಿನಿಧ್ಯ
ಮೀನುಗಾರರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದರೊಂದಿಗೆ ಅವರ ಜೀವನ ಸುಧಾರಣೆಗಾಗಿ ಕಾಂಗ್ರೆಸ್ ಮೀನುಗಾರರ ವಿಭಾಗ ಆರಂಭಿಸಿದೆ. ನೂತನ ಅಧ್ಯಕ್ಷ ಲಿಂಗರಾಜು ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಮೀನುಗಾರ ವಿಭಾಗದ ಜಿಲ್ಲಾ ಸಮಿತಿ ರಚಿಸುವ ಮೂಲಕ ಸಮುದಾಯಕ್ಕೆ ಕಾಂಗ್ರೆಸ್ ಸಿದ್ಧಾಂತ ಕುರಿತಂತೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮೀನುಗಾರ ಸಮುದಾಯವನ್ನು ಬಲಗೊಳಿಸಬೇಕಿದೆ. ಹಾಗೆಯೇ ಕರಾವಳಿ ಪ್ರದೇಶದಲ್ಲಿ ಮೀನುಗಾರರನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸಿ, ಯುವಕರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಆಗಬೇಕು. ಮೀನುಗಾರಿಕೆ ವಿಭಾಗ ಆರಂಭದಿಂದ ಮೀನುಗಾರರ ವಾಣಿಜ್ಯ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶವೂ ಇದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ನೂತನ ಅಧ್ಯಕ್ಷ ಲಿಂಗರಾಜು, ಮೀನುಗಾರರ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಯು. ಆರ್. ಸಭಾಪತಿ ಮೊದಲಾದವರಿದ್ದರು.
ಚುನಾವಣೆಗೆ ಸಜ್ಜಾಗಲು ಕರೆ
ಮುಂದಿನ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಪ್ರಮುಖವಾಗಿದೆ. ದೇಶದ ಭವಿಷ್ಯ ತೀರ್ಮಾನ ಮಾಡುವ ಚುನಾವಣೆ ಇದಾಗಿದೆ. ಮುಂದಿನ ಮೂರ್‍ನಾಲ್ಕು ತಿಂಗಳು ಪಕ್ಷದ ಕಾರ್ಯಕರ್ತರು, ಸದಸ್ಯರು ಮತ್ತು ಪದಾಧಿಕಾರಿಗಳು ಅವಿರತವಾಗಿ ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕರ್ನಾಟಕದಿಂದ ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.