ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಲ್ಲಿಕೆ ಆಗಿರುವ ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಕೊನೆ ದಿನ ಆಗಿದ್ದು, ಗೆಲುವಿನ ಗುದ್ದಾಟಕ್ಕೆ ಅಖಾಡದಲ್ಲಿ ಉಳಿಯಲಿರುವ ಚುನಾವಣಾ ಕಲಿಗಳ ಸ್ಪಷ್ಟ ಚಿತ್ರಣ ಸಿಗಲಿದೆ.
ಏ.20ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಯವಾಗಿದ್ದು, ಜಿಲ್ಲೆಯ 5 ಕ್ಷೇತ್ರಗಳಲ್ಲಿ 119 ನಾಮಪತ್ರ ಸಲ್ಲಿಕೆ ಆಗಿದ್ದವು. ಆ ಪೈಕಿ ಪರಿಶೀಲನೆ ವೇಳೆ ದೋಷಪೂರಿತ 9 ನಾಮಪತ್ರ ತಿರಸ್ಕೃತಗೊಳಿಸಿರುವ ಚುನವಣಾ ಅಧಿಕಾರಿಗಳು, ಕ್ರಮಬದ್ಧವಾಗಿದ್ದ 110 ಸ್ವೀಕರಿಸಿದ್ದಾರೆ. ಉಮೇದುವಾರಿಕೆ ವಾಪಸ್ ಪಡೆಯಲು ಏ.24 ಕ್ಕೆ ಕೊನೆ ದಿನ ಆಗಿದ್ದು, ಯಾರೆಲ್ಲಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆಂಬ ಬಗ್ಗೆ ಕುತೂಹಲಕ್ಕೆ ಇಂದು ಅಂತಿಮ ತೆರೆ ಬೀಳಲಿದೆ.
ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಜತೆಗೆ ಈ ಬಾರಿ ಕರ್ನಾಟಕ ರಾಷ್ಟ್ರ ಸಮಿತಿ, ಬಹುಜನ ಸಮಾಜ ಪಕ್ಷ, ಆಮ್ ಆದ್ಮಿ ಪಕ್ಷ, ಮತ್ತಿತರ ಕೆಲ ಪ್ರಾದೇಶಿಕ ಪಕ್ಷಗಳು ಕೂಡ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದ್ದು, ನೋಂದಾಯಿತ ಪಕ್ಷಗಳಿಗಿಂತ ಪಕ್ಷೇತರರು ಈ ಬಾರಿ ಅಧಿಕ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿರುವುದು ಎದ್ದು ಕಾಣುತ್ತಿದೆ. ಗೌರಿಬಿದನೂರು ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಗಳ ಆರ್ಭಟ ಪ್ರಮುಖ ಪಕ್ಷಗಳಿಗೆ ಸೆಡ್ಡು ಹೊಡೆಯುವಂತಿದೆ.
ಇಂದಿನಿಂದ ಚುನಾವಣಾ ಬಿಸಿ ಜೋರು: ಇಲ್ಲಿವರೆಗೂ ಚುನಾವಣಾ ಭಾಗವಾಗಿ ಅಭ್ಯರ್ಥಿಗಳ ಆಯ್ಕೆಗೆ ನಡೆದಿದ್ದ ತಂತ್ರಗಾರಿಕೆಗಳೇ ಬೇರೆಯಾದರೆ, ಮುಂದೆ ಮತದಾರರ ಬೇಟೆಗೆ ಪಕ್ಷಗಳ ತಂತ್ರಗಳೇ ಬೇರೆ ಇರಲಿವೆ. ಚುನಾವಣಾ ಅಖಾಡದಲ್ಲಿ ಯಾರೆಲ್ಲಾ ಉಳಿಯಲಿದ್ದಾರೆಂಬ ಎದುರಾಳಿಗಳ ಕುರಿತು ನಾಮಪತ್ರ ವಾಪಸ್ ಪಡೆದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದ್ದು, ನಂತರ ಪಕ್ಷಗಳ ನಡುವೆ ಗೆಲುವಿಗಾಗಿ ತಂತ್ರ, ಪ್ರತಿತಂತ್ರಗಳಿಗೆ ಚುನಾವಣಾ ಕಣ ಸಾಕ್ಷಿಯಾಗಿ ನೇರ ಹಣಾಹಣಿಯಿಂದ ಕೂಡಿರಲಿದೆ.
ಕುತೂಹಲ ಕೆರಳಿಸಿರುವ ಸಂಪಂಗಿ, ಪುಟು ಅಂಜಿನಪ್ಪ: ನಾಮಪತ್ರ ವಾಪಸ್ ಪಡೆಯಲು ಏ.24 ಸೋಮವಾರ ಕಡೆ ದಿನ. ಈಗಾಗಲೇ ತಮಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನ ಗೊಂಡು ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಎನ್.ಸಂಪಂಗಿ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅದೇ ರೀತಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ತಮಗೆ ಟಿಕೆಟ್ ಕೈ ತಪ್ಪಿರುವುದರಿಂದ ಆಕ್ರೋಶಗೊಂಡು ಪುಟ್ಟು ಅಂಜಿನಪ್ಪ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಕಳೆದ ಬಾರಿಯೂ ಪುಟ್ಟು ಅಂಜಿನಪ್ಪ ಪಕ್ಷೇತರಾಗಿ ಸ್ಪರ್ಧಿಸಿದ್ದರು. ಈ ಬಾರಿ ಕೂಡ ಚುನಾವಣಾ ಅಖಾಡದಲ್ಲಿ ಇರುತ್ತಾರಾ ಅಥವಾ ನಾಮಪತ್ರ ವಾಪಸ್ ಪಡೆಯುತ್ತಾರಾ ಎನ್ನುವುದು ಕಾದು ನೋಡಬೇಕಿದೆ. ಪಕ್ಷಗಳಿಂದ ಬಂಡಾಯಗಾರರ ಮನವೊಲಿಸುವ ಯಾವ ಪ್ರಯತ್ನಗಳು ನಡೆದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಪಕ್ಷೇತರರಿಗೆ ಕಣದಿಂದ ಹಿಂದೆ ಸರಿಯುವಂತೆ ಇನ್ನಿಲ್ಲದ ಒತ್ತಡ: ಜಿಲ್ಲೆಯ 5 ಕ್ಷೇತ್ರಗಳಿಂದ ಬರೋಬ್ಬರಿ 42 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದು ಒಂದೇ ಹೆಸರಿನ ಹಲವು ವ್ಯಕ್ತಿಗಳು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿರುವುದು ರಾಜಕೀಯ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ. ಚಿಂತಾಮಣಿ ಕ್ಷೇತ್ರದಲ್ಲಿ 6, ಬಾಗೇಪಲ್ಲಿ-10, ಗೌರಿಬಿದನೂರು-15, ಶಿಡ್ಲಘಟ್ಟ-4 ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 7 ಮಂದಿ ಸೇರಿ 42 ಮಂದಿ ಪಕ್ಷೇತರರು ಇದ್ದಾರೆ. ಕೆಲ ರಾಜಕೀಯ ಪಕ್ಷಗಳು ಪಕ್ಷೇತರರನ್ನು ಕಣದಿಂದ ಹಿಂದೆ ಸರಿಯುವಂತೆ ಒತ್ತಡ ತರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಗೆಲ್ಲುವ ಅಭ್ಯರ್ಥಿಗೆ ಒಂದು ವೋಟ್ ಕೂಡ ಮಹತ್ವದಾಗಿದೆ. ಪಕ್ಷೇತರರ ಸ್ಪರ್ಧೆಯಿಂದ ಮತಗಳ ವಿಭಜನೆ ಆಗಬಹುದೆಂಬ ಆತಂಕದಿಂದ ನಾಮಪತ್ರ ವಾಪಸ್ ಪಡೆಯುವಂತೆ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷೇತರ ಹಿಂದೆ ದುಂಬಾಲು ಬಿದ್ದಿದಾರೆಂಬ ಮಾತು ಕೇಳಿ ಬರುತ್ತಿದೆ.
-ಕಾಗತಿ ನಾಗರಾಜಪ್ಪ