ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೂನ್ 29 ರಂದು ಬಹುತೇಕ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿ ಪ್ರದರ್ಶಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿದ್ದು, ಪ್ರದರ್ಶಕರ ವಲಯದಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಲಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರು, ವಿತರಕ, ನಿರ್ಮಾಪಕ ಹಾಗು ಪ್ರದರ್ಶಕ ಈ ಮೂರು ವಲಯದಲ್ಲೂ ಸದಸ್ಯರಾಗಿದ್ದಾರೆ. ಹಾಗಾಗಿ, ಈ ಬಾರಿ ಪ್ರದರ್ಶಕರ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ರಾಕ್‌ಲೈನ್ ವೆಂಕಟೇಶ್ ಸ್ಪರ್ಧೆಗಿಳಿಯಲಿದ್ದಾರೆ.
ಈಗಾಗಲೇ ರಾಕ್‌ಲೈನ್ ವೆಂಕಟೇಶ್ ಅವರು, ಈ ಹಿಂದೆ ನಿರ್ಮಾಪಕರ ವಲಯದಿಂದ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಸ್ಪರ್ಧೆಗಿಳಿಯಲಿದ್ದಾರೆ. ಕಳೆದ ಬಾರಿ ವಿತರಕ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಆ ವಲಯದಿಂದ ಎಸ್.ಎ.ಚಿನ್ನೇಗೌಡ ಅವರು ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂ.29 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ನರಸಿಂಹಲು, ಜಯರಾಜು, ಥಾಮಸ್ ಡಿಸೋಜ ಅವರುಗಳು ಸ್ಪರ್ಧೆಗಿಳಿಯಲಿದ್ದಾರೆ ಎಂಬು ಮಾತುಗಳು ಸಹ ಕೇಳಿಬರುತ್ತಿವೆ. ಅಂತೆಯೇ ಮಂಡಳಿಯ ಇತರೆ ಸ್ಥಾನಗಳಾದ ಉಪಾಧ್ಯಕ್ಷ, ಖಚಾಂಚಿ, ಗೌರವ ಕಾರ್ಯದರ್ಶಿ ಹಾಗು ಕಾರ್ಯದರ್ಶಿ ಸ್ಥಾನಗಳಿಗೆ ಎಲ್ಲಾ ವಲಯಗಳಿಂದಲೂ ಸ್ಪರ್ಧಿಸಬಹುದಾಗಿದೆ. ಈ ಪೈಕಿ ನಿರ್ಮಾಪಕರ ವಲಯದಿಂದ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಗಳಾಗಿ ನಿರ್ಮಾಪಕರಾದ ಎನ್.ಎಂ.ಸುರೇಶ್ ಮತ್ತು ಎಂ.ಜಿ.ರಾಮಮೂರ್ತಿ ಅವರುಗಳ ಹೆಸರುಗಳು ಸಹ ಚಾಲ್ತಿಯಲ್ಲಿವೆ. ಖಚಾಂಚಿ ಸ್ಥಾನದ ಆಕಾಂಕ್ಷಿಯಾಗಿ ನಾರಾಯಣ ರೆಡ್ಡಿ ಎಂಬುವವರ ಹೆಸರು ಕೇಳಿಬರುತ್ತಿದೆ.
ಮೇ.23 (ಇಂದು) ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಈಗ ಫಿಲ್ಮ್ ಚೇಂಬರ್ ಚುನಾವಣೆಯ ಸರದಿ. ಜೂ.29 ರಂದು ಮಂಡಳಿ ಚುನಾವಣೆ ನಡೆದರೆ ಯಾರೆಲ್ಲಾ ಸ್ಪರ್ಧೆಗಿಳಿಯುತ್ತಾರೆ, ಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕು.