Advertisement

Cauvery ಕಿಚ್ಚು: ಮುಂದುವರಿದ ಜನಾಕ್ರೋಶ: ಹಲವರ ಬಂಧನ, ಬಿಡುಗಡೆ

11:11 PM Sep 04, 2023 | Team Udayavani |

ಮೈಸೂರು/ಮಂಡ್ಯ/ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯಗಳ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ನಡೆಗೆ ಜನಾಕ್ರೋಶ ಹೆಚ್ಚಾಗಿದೆ. ಮೈಸೂರು, ಮಂಡ್ಯ ಸಹಿತ ರಾಜ್ಯದ ಹಲವೆಡೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ಕಬ್ಬು ಬೆಳೆಗಾರ ಒಕ್ಕೂಟದ ವತಿಯಿಂದ ಸೋಮವಾರವೂ ಪ್ರತಿಭಟನೆ ನಡೆದಿದೆ.

Advertisement

ಮಂಡ್ಯ ನಗರದಲ್ಲಿ ಸೋಮವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ಮಾತೆಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾ ಧಿಕಾರಿ ಕಚೇರಿ ಮುಂಭಾಗ ಇರುವ ಕಾವೇರಿ ಉದ್ಯಾನದಲ್ಲಿರುವ ಕಾವೇರಿ ಪ್ರತಿಮೆ ಬಳಿ ಖಾಲಿ ಕೊಡಗಳೊಂದಿಗೆ ಆಗಮಿಸಿದ ಪ್ರತಿಭಟನಕಾರರು, ಕಾವೇರಿ ಮಾತೆಗೆ ಹಾಲು, ಮೊಸರು, ಎಳನೀರು, ಗಂಧ, ಅರಿಶಿನ, ಕುಂಕುಮ, ಜೇನು ತುಪ್ಪ ಹಾಗೂ ಸಕ್ಕರೆಯಿಂದ ಅಭಿಷೇಕ ಮಾಡಿ, ಕಾವೇರಿ ತೀರ್ಪು ರಾಜ್ಯದ ಪರವಾಗಿ ಬರಲಿ ಎಂದು ಪ್ರಾರ್ಥಿಸಿದರು.

ರೈತ ಹಿತರಕ್ಷಣಾ ಸಮಿತಿ ಧರಣಿ 5ನೇ ದಿನಕ್ಕೆ
ಮಂಡ್ಯ ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ನಡೆಸುತ್ತಿರುವ ಧರಣಿ 5ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಮುಂದುವರಿದಿದೆ.

ರೈತಸಂಘಟನೆಯ ಕಾರ್ಯಕರ್ತರು ಮದ್ದೂರು ತಾಲೂಕು ಭಾರತೀನಗರದಲ್ಲಿರುವ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಜಮಾಯಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಶ್ರೀರಂಗಪಟ್ಟಣ ತಾಲೂಕಿನ ಪಂಪ್‌ ಹೌಸ್‌ ಬಳಿ ಇರುವ ಮೈಸೂರು ನೀರು ಸರಬರಾಜು ಘಟ ಕದ ಮುಂಭಾಗದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕನ್ನಂಬಾಡಿ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ರೈತ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿ, ಜಾಮೀನಿನಲ್ಲಿ ಬಿಡುಗಡೆ ಮಾಡಿದರು.

ಮಂಡ್ಯ ಜಿಲ್ಲೆಯ ಜನರ ಬೇಸಾಯಕ್ಕೆ ಬಿಸ್ಲೆರಿ ನೀರೇ ಗತಿ ಎಂದು ಮಂಡ್ಯ ರಕ್ಷಣ ವೇದಿಕೆ ಕಾರ್ಯಕರ್ತರು ಶ್ರೀರಂಗಪಟ್ಟಣ ತಾಲೂಕಿನ ಹನುಮಂತನಗರದಲ್ಲಿ ಬಿಸ್ಲೆರಿ ನೀರು ಬಳಸಿ ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಪಾಂಡವಪುರ ಪಟ್ಟಣದ ಡಾ| ಜಕುಮಾರ್‌ ವೃತ್ತದಲ್ಲಿ ರೈತರು, ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆ ತಡೆದು ಜಾನುವಾರು, ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಲಾಯಿತು.

Advertisement

ಸಂಸದರ ಜಿಲ್ಲಾ ಕಚೇರಿಗಳ ಎದುರು ರೈತರ ಪ್ರತಿಭಟನೆ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಸೋಮವಾರ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸಂಸದರ ಕಚೇರಿ ಮುಂದೆ ಅನ್ನದಾತರು ಪ್ರತಿಭಟಿಸಿದರು. ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಧಾರವಾಡ, ಬೆಳಗಾವಿ, ಕಲಬುರಗಿ, ಗದಗ ಜಿಲ್ಲಾ ಲೋಕಸಭಾ ಸದಸ್ಯರ ಕಚೇರಿ ಮುಂದೆ ರಾಜ್ಯ ರೈತ ಸಂಘಟನೆ ಒಕ್ಕೂಟ, ಕನ್ನಡ ಪರ ಸಂಘಟನೆಗಳು ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹಕ್ಕೊತ್ತಾಯದ ಪತ್ರ ಸಲ್ಲಿಸಿದರು. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ವಿಜಯಪುರದಲ್ಲಿ ಸಂಸದ ರಮೇಶ್‌ ಜಿಗಜಿಣಗಿ, ಮೈಸೂರಿನಲ್ಲಿ ಪ್ರತಾಪ್‌ ಸಿಂಹ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತದಲ್ಲಿ ಸಂಸದ ತೇಜಸ್ವಿಸೂರ್ಯ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್‌ ಸಹಿತ ಹಲವು ಸಂಸದರ ಕಚೇರಿ ಎದುರು ಧರಣಿ ನಡೆಸಿದರು.

6ನೇ ದಿನವೂ
ತಮಿಳುನಾಡಿಗೆ ಹರಿದ ಕಾವೇರಿ
ಭಾರೀ ವಿರೋಧದ ನಡುವೆಯೂ 6ನೇ ದಿನವೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಯಿತು. ಇದರಿಂದ ರೈತರಿಗೆ ಸಂಕಷ್ಟದ ಜತೆಗೆ ಆತಂಕವೂ ಎದುರಾಗಿದೆ. ಕೆಆರ್‌ಎಸ್‌ನ ನೀರಿನ ಮಟ್ಟ ಕುಸಿತದಿಂದ ರೈತರಿಗೆ ಕಟ್ಟು ಪದ್ಧತಿಯಲ್ಲೂ ನೀರಿಲ್ಲದಂತಾಗಿದೆ. ಇದೇ 9ರಿಂದ 24ರವರೆಗೆ ಜಿಲ್ಲೆಯ ನಾಲೆಗಳಿಗೆ ಎರಡನೇ ಹಂತದ ಕಟ್ಟುಪದ್ಧತಿಯಲ್ಲಿ ನೀರು ಹರಿಸಬೇಕಾಗಿದೆ. ಅಷ್ಟೊತ್ತಿಗಾಗಲೇ ತಮಿಳುನಾಡಿಗೆ ನೀರು ಹರಿದು ಹೋಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರೈತ ಸಂಘದಿಂದ ಸುಪ್ರೀಂಗೆ ಅರ್ಜಿ
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕಾನೂನು ಹೋರಾಟಕ್ಕೆ ರೈತ ಸಂಘದಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು. ಕೆಆರ್‌ಎಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಹೊರತುಪಡಿಸಿ ಪ್ರತ್ಯೇಕವಾಗಿ ರೈತಸಂಘದಿಂದ ಅರ್ಜಿ ಸಲ್ಲಿಸಲಾಗುವುದು. ಸರಕಾರ ಮಾಡಿರುವ ಪ್ರಕರಣದ ಫೈಲ್‌ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಮಾಜಿ ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್‌ ಅವರಿಂದ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next