ಶಿವಮೊಗ್ಗ: ಬೇರೆ ಸಚಿವ ಸ್ಥಾನಗಳಿಗೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ನನ್ನ ಪ್ರಕರಣದಲ್ಲಿ ತನಿಖಾ ಸಂಸ್ಥೆ ಕ್ಲೀನ್‌ಚಿಟ್ ನೀಡಿದೆ. ನನಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನವಿದೆ. ಆದರೂ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ವಿಸ್ತರಣೆ ಯಾವಾಗ ಆಗುತ್ತೋ ನನಗೆ ಗೊತ್ತಿಲ್ಲ. ಕೇಂದ್ರ ನಾಯಕರ ಜತೆ ಏನು ತೀರ್ಮಾನ ತೆಗೆದುಕೊಳ್ತಾರೋ ಅದು ರಾಜ್ಯ ನಾಯಕರಿಗೆ ಬಿಟ್ಟಿದ್ದು. ಆದರೆ ಸಚಿವ ಸ್ಥಾನಗಳನ್ನು ಖಾಲಿ ಬಿಡಬಾರದು. ನಳಿನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ಖಾಲಿ ಸ್ಥಾನ ತುಂಬುವ ಬಗ್ಗೆ ಗಮನ ಕೊಡಬೇಕು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕು ಎಂದು ಈ ಮೂವರಲ್ಲಿ ನಾನು ಆಗ್ರಹಿಸುತ್ತೇನೆ ಎಂದರು.
ಸ್ವಾತಂತ್ರ್ಯದ ಬಳಿಕ ಡಾ| ಅಂಬೇಡ್ಕರ್ ಮೀಸಲಾತಿ ತಂದಿದ್ದರು. ದಲಿತ, ಹಿಂದುಳಿದ ವರ್ಗಗಳಿಗೆ ಕನಿಷ್ಠ 10 ವರ್ಷ ಮೀಸಲಾತಿ ನೀಡಲು ತೀರ್ಮಾನಿಸಿದ್ದರು. ಆದರೆ 75 ವರ್ಷ ಕಳೆದರೂ ಎಸ್ಸಿ-ಎಸ್ಪಿ ಸಹಿತ ಅನೇಕ ಒಬಿಸಿ ವರ್ಗಗಳು ಶಿಕ್ಷಣ, ಉದ್ಯೋಗ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಹೀಗಾಗಿ ಅವರ ಅನೇಕ ವರ್ಷಗಳ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ. ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಉಳಿದಂತೆ ಹಿಂದುಳಿದ ವರ್ಗಗಳಿಂದಲೂ ಮೀಸಲಾತಿ ಬೇಡಿಕೆಯಿದೆ. ಕುಲಶಾಸ್ತ್ರ ಅಧ್ಯಯನ ವರದಿ ಬಂದ ಬಳಿಕ ಸರಕಾರ ನಿರ್ಧರಿಸಲಿದೆ.
ಕುರುಬ ಸಮಾಜದ ಎಸ್ಟಿ ಮೀಸಲಾತಿ ಬಗ್ಗೆಯೂ ರಾಜ್ಯ ಸರಕಾರ ಅನುಕೂಲ ಮಾಡಲಿದೆ ಎಂದು ಹೇಳಿದರು.