Advertisement

Karnataka ;ಸಂಪತ್ತಿನ ಸಮಾನ ಹಂಚಿಕೆಯಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

01:02 AM Nov 10, 2023 | Team Udayavani |

ಬೆಂಗಳೂರು: ಕಾಯಕ ಸಂಸ್ಕೃತಿ ಮೂಲಕ ಉತ್ಪಾದನೆ ಆಗುವ ಸಂಪತ್ತನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುವುದೇ ದಾಸೋಹ. ಇಂತಹ ಕಾಯಕ ಹಾಗೂ ದಾಸೋಹದಲ್ಲಿ ಸಮಾಜದ ಎಲ್ಲರೂ ಭಾಗಿಯಾದಾಗ ಮಾತ್ರ ಬಡತನ, ನಿರುದ್ಯೋಗ ದೂರಾಗಿ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಹಾಗೂ ಕಾರ್ಮಿಕ ವರ್ಗವು ದೇಶದಲ್ಲಿ ಸಂಪತ್ತು ಉತ್ಪಾದಿಸುತ್ತದೆ. ಅದನ್ನು ಅನುಭವಿಸುವ ಇನ್ನೊಂದು ವರ್ಗವಿರುತ್ತದೆ. ಯಾರೂ ಕೂತು ತಿನ್ನುವಂತಾಗಬಾರದು. ಸಂಪತ್ತಿನ ಉತ್ಪಾದನೆಯಲ್ಲಿ ಎಲ್ಲರೂ ತೊಡಗಬೇಕು. ಅದನ್ನು ಸಮಾನವಾಗಿ ಹಂಚಿಕೊಂಡು ಅನುಭವಿಸಬೇಕು. ಇದನ್ನೇ ಬಸವಣ್ಣನವರು ಕಾಯಕ ಹಾಗೂ ದಾಸೋಹ ಸಂಸ್ಕೃತಿ ಎಂದರು. ಬಾಬಾಸಾಹೇಬರ ಸಂವಿಧಾನದಲ್ಲೂ ಇದೇ ವಿಚಾರ ಅಡಗಿದೆ. ಅದನ್ನರಿತು ನಮ್ಮ ಸರಕಾರ ಗ್ಯಾರಂಟಿಗಳೂ ಸೇರಿ ಜನಪರ ಯೋಜನೆಗಳನ್ನು ನೀಡುತ್ತಿದೆ ಎಂದರು.

ಶಿಕ್ಷಣದಿಂದ ವಂಚಿತರಾಗಬಾರದು
ಯಾವುದೇ ರಾಷ್ಟ್ರದ ಕಲ್ಯಾಣವು ಕಾರ್ಮಿಕ ಶಕ್ತಿಯಿಂದಲೇ ಆಗುವುದು. ಕಾರ್ಮಿಕರ ಪೈಕಿ ಶೇ.83ರಷ್ಟು ಅಸಂಘಟಿತ ಕಾರ್ಮಿಕರಿದ್ದು, ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ 9.60 ಲಕ್ಷ ವಿದ್ಯಾರ್ಥಿಗಳಿಗೆ 226 ಕೋಟಿ ರೂ. ಶೈಕ್ಷಣಿಕ ಧನಸಹಾಯವನ್ನು ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಸಂವಿಧಾನದ ಪೀಠಿಕೆ ಓದಿಸುವ ಮೂಲಕ ಇತಿಹಾಸದ ಅರಿವು, ಭವಿಷ್ಯದ ಕಲ್ಪನೆ ನೀಡಲಾಗುತ್ತಿದೆ. ಎಲ್ಲ ಮಕ್ಕಳೂ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲಿ. ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಲಿ ಎಂದು ಹಾರೈಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್‌, ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

6 ತಿಂಗಳಲ್ಲಿ 55 ಲಕ್ಷ ಕಾರ್ಮಿಕರಿಗೆ ನೆರವು
ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾತನಾಡಿ, ಅಸಂಘಟಿತ ವಲಯದಲ್ಲಿ 1.80 ಕೋಟಿ ಕಾರ್ಮಿಕರಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ 55 ಲಕ್ಷ ಅಸಂಘಟಿತ ಕಾರ್ಮಿಕರಿಗೆ ನೆರವು ನೀಡಿದ್ದೇವೆ. ವಿವಿಧೋತ್ಪನ್ನಗಳನ್ನು ತಲುಪಿಸುವ ಸುಮಾರು 4-5 ಲಕ್ಷ ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ ನೀಡಿದ್ದು, ರಾಜ್ಯದಲ್ಲಿ ಸಂಗ್ರಹವಾಗುವ ಸಾರಿಗೆ ಉಪಕರ (ಸೆಸ್‌)ದಲ್ಲಿ ಶೇ.25ರಷ್ಟನ್ನು ಬಳಸಿಕೊಂಡು 50 ಲಕ್ಷ ಮಂದಿ ವಾಣಿಜ್ಯ ವಾಹನ ಚಾಲಕರು, ಕ್ಲೀನರ್‌ಗಳು, ಗ್ಯಾರೇಜ್‌ ಮಾಲಕರು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಉದ್ದೇಶಿಸಿದೆ. ಇದಲ್ಲದೆ, ಬೀದಿಬದಿ ವ್ಯಾಪಾರಿಗಳು, ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರು, ಗಾರ್ಮೆಂಟ್‌ ನೌಕರರು, ಪತ್ರಿಕಾ ವಿತರಕರು, ಫ್ರೀಲ್ಯಾನ್ಸ್‌ಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಲಕ್ಷಾಂತರ ನಕಲಿ ಕಾರ್ಮಿಕ ಕಾರ್ಡ್‌ಗಳು ವಿತರಣೆಯಾಗಿದ್ದು, ಅರ್ಹರನ್ನು ಶೋಧಿಸಲಾಗುತ್ತದೆ. ಸಾರಿಗೆ ಉಪಕರದಂತೆ ಆಸ್ತಿ ತೆರಿಗೆಯ ಉಪಕರವನ್ನೂ ಒದಗಿಸಿದರೆ ಇನ್ನಷ್ಟು ಕೆಲಸ ಮಾಡಬಹುದಾಗಿದೆ ಎಂಬ ಪ್ರಸ್ತಾವನೆ ಇಟ್ಟರು. ಉಪಕರಗಳ ಸಂಗ್ರಹಣೆ ಹೆಚ್ಚಿಸಲು ಜಿಯೋ ಮ್ಯಾಪಿಂಗ್‌ ಮಾಡುವ ಚಿಂತನೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next