ಬೆಂಗಳೂರು: ಸಾಮಾನ್ಯವಾಗಿ ಪ್ರತಿ ಬಾರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಜನರಿಗೆ ಶಾಕ್ ಕೊಡುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಸರ್ಕಾರಕ್ಕೇ “ಶಾಕ್’ ನೀಡಿದೆ!
ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚದ ರೂಪದಲ್ಲಿ ಪ್ರತಿ ಯೂನಿಟ್‌ಗೆ ಕನಿಷ್ಠ 33ರಿಂದ ಗರಿಷ್ಠ 51 ಪೈಸೆ ಹೆಚ್ಚಳ ಮಾಡ ಲಾಗಿದೆ. ಇದರಿಂದ ಒಟ್ಟಾರೆ ಗೃಹ ಬಳಕೆಗೆ ಅನುಮೋದನೆ ನೀಡಲಾದ 14,090 ಮಿಲಿ ಯನ್ ಯೂನಿಟ್ ವಿದ್ಯುತ್‌ಗೆ ಲೆಕ್ಕ ಹಾಕಿದಾಗ, ವಾರ್ಷಿಕ ಸುಮಾರು 500 ಕೋಟಿ ರೂ. ಹೊರೆ ಬೀಳಲಿದೆ. ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರವೇ ಈ ಹೊರೆ ಭರಿ ಸುವುದು ಅನಿವಾರ್ಯ ಆಗಿದೆ.
ಗೃಹಬಳಕೆಗೆ ವಾರ್ಷಿಕ ಅನುಮೋದಿತ ವಿದ್ಯುತ್ 14,089 ಮಿಲಿಯನ್ ಯೂನಿಟ್ ಮಾಸಿಕವಾಗಿ ಲೆಕ್ಕಹಾಕಿದರೆ, 1,174 ಮಿಲಿಯನ್ ಯೂನಿಟ್ ಆಗುತ್ತದೆ. ಇದನ್ನು ಈಗ ಬೆಸ್ಕಾಂ ವ್ಯಾಪ್ತಿಯಲ್ಲಾದ ಪರಿಷ್ಕರಣೆಗೆ (ಪ್ರತಿ ಯೂನಿಟ್‌ಗೆ 51 ಪೈಸೆ ಹೆಚ್ಚಳ) ತಾಳೆ ಹಾಕಿದಾಗ, 500 ಕೋಟಿ ರೂ. ಆಗುತ್ತದೆ. ಇದರ ಜತೆಗೆ ತೆರಿಗೆ 45 ಕೋಟಿ ರೂ. ಆಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಸರ್ಕಾರವೇ ಹೇಳುವಂತೆ ಗೃಹಬಳಕೆದಾರರಲ್ಲಿ ಶೇ. 90ರಷ್ಟು ಜನ ಉಚಿತ ವಿದ್ಯುತ್ ಯೋಜನೆ ಅಡಿ ಒಳಪಡುತ್ತಾರೆ. ಹಾಗಾಗಿ, ಬಹುತೇಕ ಈ ಮೊತ್ತವನ್ನು ಸ್ವತಃ ಸರ್ಕಾರ ಭರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲ್ಪಾವಧಿಯಲ್ಲೇ 1.71 ರೂ. ಏರಿಕೆ ದಾಖಲೆ!: ವಿಶೇಷವೆಂದರೆ ಇದು ಅಲ್ಪಾವಧಿಯಲ್ಲಾದ ದಾಖಲೆ ಪ್ರಮಾಣದ ವಿದ್ಯುತ್ ದರ ಏರಿಕೆ ಎನ್ನಲಾಗಿದೆ. ಈಚೆಗಷ್ಟೇ ಅಂದರೆ ಮೇ 12ರಂದು ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಿ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಈಗ ಕೇವಲ 20 ದಿನಗಳ ಅಂತರದಲ್ಲಿ ಮತ್ತೆ ಜುಲೈ- ಸೆಪ್ಟೆಂಬರ್ ಮತ್ತು ಅಕ್ಟೋಬರ್- ಡಿಸೆಂಬರ್‌ಗೆ ಅನ್ವಯ ಆಗುವಂತೆ ಮತ್ತೆ ಕನಿಷ್ಠ 33 ಪೈಸೆಯಿಂದ ಗರಿಷ್ಠ 51 ಪೈಸೆಯಷ್ಟು ಹೆಚ್ಚಳ ಮಾಡಿದೆ.
ಮುಂದಿನ ಎರಡೂ ತ್ತೈಮಾಸಿಕಗಳ ಬೆಸ್ಕಾಂನಲ್ಲಿ ಮಾಡಿದ ಪರಿಷ್ಕರಣೆ ಪ್ರಕಾರವೇ 1.01 ರೂ. ಪ್ರತಿ ಯೂನಿಟ್‌ಗೆ ಹೆಚ್ಚಳ ಆಗುತ್ತದೆ. ಇದರೊಂದಿಗೆ ಒಟ್ಟಾರೆ 1.71 ರೂ. ಪ್ರತಿ ಯೂನಿಟ್‌ಗೆ ಏರಿಕೆಯಾದಂತಾಗುತ್ತದೆ. ಇನ್ನು ಈ ಹಿಂದೆ ಹೊರಡಿಸಿದ ಆದೇಶದ ಪ್ರಕಾರ 0-100 ಯೂನಿಟ್‌ವರೆಗೆ ಗೃಹ ಬಳಕೆದಾರರಿಗೆ 4.75 ರೂ. ಇದ್ದು, 100 ಯೂನಿಟ್ ಮೀರಿದರೆ ಒಟ್ಟಾರೆ ಬಳಕೆಯ ಪ್ರತಿ ಯೂನಿಟ್‌ಗೆ 7 ರೂ. ಆಗುತ್ತದೆ. ಇದು ಕೂಡ ಪರೋಕ್ಷವಾಗಿ ಸರ್ಕಾರಕ್ಕೆ ಹೊರೆಯೇ ಆಗುತ್ತದೆ. ಇದೇ ಕಾರಣಕ್ಕೆ ಕಳೆದ ಒಂದು ವರ್ಷದ ಸರಾಸರಿ ಮಾಡಿ, ಹೆಚ್ಚುವರಿ ಶೇ. 10ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಣದ ಸಮನ್ವಯ: ಕೆಇಆರ್‌ಸಿ ಮೇ 12ರಂದು ವಿದ್ಯುತ್ ಪರಿಷ್ಕರಣೆಗೆ ಸಂಬಂಧಿಸಿದಂತೆ ಆದೇಶಹೊರಡಿಸಿದಾಗ ಸರ್ಕಾರ ಅಸ್ತಿತ್ವದಲ್ಲಿ ಇರಲಿಲ್ಲ. ಶುಕ್ರವಾರ (ಜೂನ್ 2) ಸರ್ಕಾರವು ಸಂಪುಟ ಸಭೆಯಲ್ಲಿ ಉಚಿತ ವಿದ್ಯುತ್ ಯೋಜನೆ ಘೋಷಿಸುವ ಸ್ಪಷ್ಟ ಸೂಚನೆಗಳಿದ್ದವು. ಅದೇ ದಿನ ಆಯೋಗವು ಇಂಧನ ಮತ್ತು ವಿದ್ಯುತ್ ಖರೀದಿ
ಹೊಂದಾಣಿಕೆಗೆ ಅನುಕೂಲ ಆಗುವಂತೆ ಮತ್ತೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಇದು ಸರ್ಕಾರ ಮತ್ತು ಕೆಇಆರ್‌ಸಿ ನಡುವೆ ಸಮನ್ವಯದ ಕೊರತೆಯನ್ನು ಸೂಚಿಸುತ್ತದೆ.
-ವಿಜಯಕುಮಾರ ಚಂದರಗಿ