Advertisement

Kalaburagi; ಸಾಧಕ- ಬಾಧಕ ಅವಲೋಕಿಸಿ ವಿದ್ಯುತ್ ದರ ಪರಿಷ್ಕರಣಾ ವರದಿ: ಪಿ.ರವಿಕುಮಾರ

02:21 PM Feb 20, 2024 | Team Udayavani |

ಕಲಬುರಗಿ: ಸಾಧಕ- ಬಾಧಕ ಅವಲೋಕಿಸಿ ವಿದ್ಯುತ್ ದರ ಪರಿಷ್ಕರಣೆ ವರದಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.‌ರವಿಕುಮಾರ ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರ್ನಾಟಕ ವಿದ್ಯುಚ್ಚಕ್ತಿ  ನಿಯಂತ್ರಣ ಆಯೋಗವು ಆರ್ಥಿಕ ವರ್ಷ 2025 ನೇ ಸಾಲಿಗಾಗಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆಯಲ್ಲಿ ಗ್ರಾಹಕರ ಅಭಿಪ್ರಾಯ ಆಲಿಸಿ ಮಾತನಾಡಿದ ಅವರು, ದರ ಹೆಚ್ವಳ ಮಾಡಿದರೆ ಗ್ರಾಹಕರಿಗೆ ಹೊರೆ.‌ ದರ ಹೆಚ್ಚಳ ಮಾಡದಿದ್ದರೆ ವಿದ್ಯುತ್ ಕಂಪನಿಗಳಿಗೆ ನಷ್ಟ.‌ ಹೀಗೆ ಎಲ್ಲವನ್ನು ಅಭ್ಯಸಿಸಿ ವರದಿ ರೂಪಿಸಿ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.‌

ಸೋರಿಕೆ ಹಾಗೂ ಕಳ್ಳತನ ತಡೆಗಟ್ಟಿದರೆ ದರ ಹೆಚ್ವಳದ ಪ್ರಶ್ನೆಯೇ ಬರುವುದಿಲ್ಲ‌ ಎಂದು ಗ್ರಾಹಕರು ಎಲ್ಲ ಸಭೆಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‌ನಷ್ಟ ತಪ್ಪಿಡುವ ನಿಟ್ಟಿನಲ್ಲಿ ಕ್ರಮ‌ ಕೈಗೊಳ್ಳುವಂತೆ ಕಂಪನಿಗಳಿಗೆ ಸೂಚಿಸಲಾಗಿದೆಯಲ್ಲದೇ ಹಲವಾರು ದಿನಗಳಿಂದ ಕೇಳಿ ಬರುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಭೆ ನಡೆಸುವಂತೆ ಇಲಾಖಾ ಮುಖ್ಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.‌

ವಿದ್ಯುತ್ ದರ ಹೆಚ್ಚಳ ಬೇಡವೇ ಬೇಡ: ಈಗಾಗಲೇ ದಿನ ಬಳಕೆ ವಸ್ತುಗಳ ಜತೆಗೆ ಮಳೆ ಅಭಾವದಿಂದ ತರಕಾರಿ ಬೆಲೆ ಹೆಚ್ಚಳವಾಗಿರುವಾಗ ವಿದ್ಯುತ್ ದರ ಪರಿಷ್ಕರಣೆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ದರ ಹೆಚ್ಚಳ ಬೇಡವೇ ಬೇಡ ಎಂದು ಗ್ರಾಹಕರು ಒಕ್ಕೊರಲಿನಿಂದ‌ ಸಭೆಯಲ್ಲಿ ಮನವಿ ಮಾಡಿದರು.

ವಿದ್ಯುತ್ ಪರಿಷ್ಕರಣೆ ಬದಲು ಸೋರಿಕೆ ಹಾಗೂ ಕಳ್ಳತನ ತಡೆಗಟ್ಟಿ.‌ಹಗಲು ಹೊತ್ತಿನಲ್ಲಿ ದೀಪ ಉರಿಯುದನ್ನು ತಪ್ಪಿಸಿ.‌ ಪ್ರಮುಖವಾಗಿ ವಿದ್ಯುತ್ ನಿಗಮದಲ್ಲಿ ನಡೆಯುತ್ತಿರುವ ಭೃಷ್ಟಾಚಾರ, ಲಂಚಗುಳಿತನ ತಪ್ಪಿಸಿ ಎಂದು ಆಯೋಗದ ಮುಂದೆ ಮನವಿ ಮಾಡಿದರು.

Advertisement

ದೀಪಕ ಗಾದಾ ಎನ್ನುವರು ಮಾತನಾಡಿ, ಜೆಸ್ಕಾಂ ಸೇರಿ ಇತರ ಎಲ್ಲ ನಿಗಮಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸಾವಿರಾರು ಕೋ.ರೂ ಬರಬೇಕಾಗಿದ್ದು ಅದನ್ನು ಪಡೆದು ಗ್ರಾಹಕರ‌ ಮೇಲೆ ಹೇರಲಾಗುತ್ತಿರುವ ಹೊರೆ ತಪ್ಪಿಸಿ ಎಂದರು.

ದುಡ್ಡು ಕೊಟ್ಟರಷ್ಟೇ ಕೆಲಸವಾಗುತ್ತೆ: ಜೆಸ್ಕಾಂದಲ್ಲಿ ಪ್ರತಿಯೊಂದಕ್ಕೂ ಹಣ ಕೇಳುವುದು ಸಾಮಾನ್ಯವಾಗಿದೆ.‌ ಹಣ ಕೊಟ್ಟರಷ್ಟೇ ಕೆಲಸವಾಗುವ ವಾತಾವರಣ ನಿರ್ಮಾಣವಾಗಿದೆ.‌ ಎಲ್ಲದಕ್ಕೂ ಗುತ್ತಿಗೆದಾರರ ಮೂಲಕ ಬರಬೇಕೆನ್ನಲಾಗುತ್ತಿದೆ.‌ ಜೆಸ್ಕಾಂ ಅಧಿಕಾರಿಗಳು ಎಲ್ಲವೂ ಕುಳಿತ್ತಲೇ ಆಗಬೇಕೆನ್ನುತ್ತಾರೆ.‌ ಒಟ್ಟಾರೆ ಭ್ರಷ್ಟಾಚಾರ ತಡೆಗಟ್ಟಿ ಎಂದು ಸಭೆಯಲ್ಲಿ ಹಲವರು ಆಯೋಗದ ಎದುರು ಮನವಿ ಮಾಡಿದರು.

ಸಭೆಯಲ್ಲಿ ಸಾರ್ವಜನಿಕವಾಗಿ ಎಲ್ಲರೂ ಜೆಸ್ಕಾಂ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆಂದು ಹೇಳುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ‌.‌ ಪ್ರಮುಖವಾಗಿ ಜೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಆತ್ಮಾವಲೋಕನ‌ ಮಾಡಿಕೊಳ್ಳಿ ಎಂದು ಆಯೋಗದ ಅಧ್ಯಕ್ಷ ರು ಸಭೆಯಲ್ಲಿ ಜೆಸ್ಕಾಂ ಅಧಿಕಾರಗಳನ್ನು ಖಾರವಾಗಿ ಪ್ರಶ್ನಿಸಿದರಲ್ಲದೇ ಕಿವಿ‌ಮಾತು ಹೇಳಿದರು.

ಪರಿಷ್ಕರಣೆ ಎಂದರೆ ದರ ಹೆಚ್ಚಳ ಮಾಡುವುದೇ?: ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಹೆಸರಿನಲ್ಲಿ ಸಾರ್ವಜನಿಕ ಅಹವಾಲುಗಳ ಸಭೆ ನಡೆಸಲಾಗುತ್ತಿದೆ. ದರ ಪರಿಷ್ಕರಣೆ ಎಂದರೆ ದರ ಹೆಚ್ಚಳ ಮಾಡುವುದಾಗಿದೆ. ಹೀಗಾಗಿ ಪರಿಷ್ಕರಣೆ ಬದಲು ದರ ಹೆಚ್ಚಳದ ಸಭೆ ಎಂಬುದಾಗಿ ಬದಲಾಯಿಸಿ. ಒಟ್ಟಾರೆ ಒಮ್ಮೆಯಾದರೂ ವಿದ್ಯುತ್ ದರ ಕಡಿಮೆ‌ ಮಾಡಿ ಸಭೆಗೆ ಅರ್ಥ ತನ್ನಿ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎ.ರಾವೂರ ಸಭೆಯಲ್ಲಿ ಆಗ್ರಹಿಸಿದರು. ‌

ಸೋಲಾರ ದರ ಕಡಿಮೆಯಾಗಿರುವಾಗ ದರ ಹೆಚ್ಚಳವೇಕೆ?: ಸಾರ್ವಜನಿಕ ನೀಡುತ್ತಿದ್ದ ಸೋಲಾರ ದರ ಕಡಿಮೆ ಮಾಡಿರುವಾಗ, ವಿದ್ಯುತ್ ದರ ಹೆಚ್ಚಳವೇಕೆ ಎಂದು ಸುಭಾಷಚಂದ್ರ  ಬೆನಕನಹಳ್ಳಿ ಆಯೋಗವನ್ನು ಪ್ರಶ್ನಿಸಿದರು.

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣನವರ ಪ್ರತಿ ಯೂನಿಟ್ ಒಂದು ರೂ ಹೆಚ್ಚಳದ ಪ್ರಸ್ತಾಪವನ್ನು ಆಯೋಗದ ಎದುರು ಮಂಡಿಸಿದರು. ‌

ಸಭೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ್ ಸದಸ್ಯ ಎಂ.ಡಿ.ರವಿ, ಕಾರ್ಯದರ್ಶಿ ಬಿ.ಎನ್. ವರಪ್ರಸಾದ, ಉಪನಿರ್ದೇಶಕ ಶಂಕರ ಸುಂದರ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಪಾಟೀಲ್, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಭೀಮಾಶಂಕರ ಪಾಟೀಲ್, ಕಕ ಭಾಗದ ಕೈಗಾರಿಕಾ ಸಂಘರ ಪ್ರತಿನಿಧಿಗಳು ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next