Advertisement

Karnataka Elections 2023; ವಲಸಿಗ ಮತದಾರರ ಮನವೊಲಿಕೆಗೆ ಸಿದ್ಧತೆ

12:32 AM Apr 11, 2023 | Team Udayavani |

ಬೆಂಗಳೂರು: “ಉದ್ಯೋಗ ಅರಸಿ ಹೊರರಾಜ್ಯಗಳಿಗೆ ವಲಸೆ ಹೋದವರೇ ಮೇ 10ರಂದು ನಿಮ್ಮ ಸ್ವಂತ ಸ್ಥಳಕ್ಕೆ ವಾಪಸ್‌ ಆಗಿ ಓಟ್‌ ಹಾಕಿ’ ಇದು ವಲಸಿಗ ಮತ್ತು ಗೂಳೆ ಹೋದ ಮತದಾರರಿಗೆ ಚುನಾವಣ ಆಯೋಗ ಮಾಡುತ್ತಿರುವ ಮನವಿ.

Advertisement

“ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು’ ಎಂದು 2018ರ ವಿಧಾನಸಭೆ ಚುನಾವಣೆಗೆ ಘೋಷಣೆ ಇಟ್ಟುಕೊಂಡಿದ್ದ ಚುನಾವಣ ಆಯೋಗ ಮತದಾನದ ಪ್ರಮಾಣವನ್ನು ಸಾರ್ವಕಾಲಿಕ ದಾಖಲೆಯ ಶೇ. 72.13 ತಲುಪಿಸಿತ್ತು. ಈ ಬಾರಿ ಇದನ್ನು ಮೀರಿಸಿ ಹೊಸ ಇತಿಹಾಸ ಸೃಷ್ಟಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಲಸಿಗ ಮತದಾರರ ಮನವೊಲಿಕೆ ಅದರ ಒಂದು ಭಾಗವಾಗಿದೆ.

ಉದ್ಯೋಗಕ್ಕಾಗಿ ರಾಜ್ಯದಿಂದ ಬೇರೆ ರಾಜ್ಯ ಗಳಿಗೆ ವಲಸೆ ಹೋಗುವ ಕಾರ್ಮಿಕ ವರ್ಗವನ್ನು ಮತದಾನಕ್ಕೆ ಕರೆತರಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನು ನಡೆಸುವುದು ಸಾಮಾನ್ಯ. ಆದರೆ, ಖುದ್ದು ಚುನಾವಣ ಆಯೋಗ ಈ ಬಾರಿ ವಲಸಿಗ ಮತದಾರರ ಮನವೊಲಿಕೆಗೆ ಮುಂದಾಗಿದೆ. ಮತದಾನದ ದಿನವಾದ ಮೇ 10ರಂದು ಪ್ರಜಾಪ್ರಭುತ್ವದ ಹಬ್ಬ ದಿನವಾಗಿದೆ. ಈ ಹಬ್ಬದಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಳ್ಳಿ ಸಂಭ್ರಮ ಆಚರಿಸುವುದರ ಜೊತೆಗೆ ನಿಮ್ಮ ಕರ್ತ ವ್ಯವಾದ ಓಟಿನ ಹಕ್ಕನ್ನೂ ಚಲಾಯಿಸಿ ಎಂದು ಚುನಾವಣ ಆಯೋಗ ಮನವಿ ಮಾಡುತ್ತಿದೆ.

ಮತದಾನ ಪ್ರಮಾಣವನ್ನು ಹೆಚ್ಚಿಸಲು ಪೂರಕವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಭಿಯಾನಕ್ಕೆ ವಿಶೇಷ ಒತ್ತು ಕೊಟ್ಟ ಚುನಾವಣ ಆಯೋಗ, 18 ವರ್ಷದವರಿಗೆ ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿದೆ. ಯುವ ಮತದಾರರ ಹೆಸರು ಸೇರ್ಪಡೆಗೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿದೆ. ಜೊತೆಗೆ, ತೃತೀಯ ಲಿಂಗಿಗಳು, ದುರ್ಬಲ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಮನೆ ಬಾಗಿಲಿಗೆ ಹೋಗಿ ಮತದಾರರ ಹೆಸರು ಸೇರ್ಪಡೆ ಮಾಡಲಾಗಿದೆ. ವಿಕಲಚೇತನರು ಮತ್ತು 80 ವರ್ಷದ ದಾಟಿದವರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನೂ ತರಲಾಗಿದೆ. ಇದರ ಜತೆಗೆ, ವಲಸಿಗ ಮತ್ತು ಗುಳೇ ಹೋದವರನ್ನು ಮತದಾನಕ್ಕೆ ಕರೆತರಲು ಆಯೋಗ ಕಾರ್ಯಪ್ರವೃತ್ತವಾಗಿದೆ.

ಮನವೊಲಿಕೆ ಹೇಗೆ?: ಕರ್ನಾಟಕದಿಂದ ಉದ್ಯೋಗಕ್ಕಾಗಿ ನೆರೆ ರಾಜ್ಯಗಳಿಗೆ ವಲಸೆ ಹೋದವರ ಸ್ವಂತ ಊರುಗಳಲ್ಲಿರುವ ಅವರ ಕುಟುಂಬದ ಇತರ ಸದಸ್ಯರನ್ನು ಚುನಾವಣ ಆಯೋಗದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಭೇಟಿ ಮಾಡಿ, ವಲಸೆ ಹೋದವರನ್ನು ಮತದಾನದ ದಿನ ಊರಿಗೆ ಬರುವಂತೆ ಮನವೊಲಿಸಲು ವಿನಂತಿ ಮಾಡಲಾಗುತ್ತದೆ. ಅಲ್ಲದೇ ಆಯ್ದ ಜಿಲ್ಲೆಗಳ ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಬೇರೆ ರಾಜ್ಯಗಳಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಲಸೆ ಕಾರ್ಮಿಕರನ್ನು ಭೇಟಿ ಮಾಡಿ ಹೋಗುವವರನ್ನು ಮತದಾನದ ದಿನ ಬನ್ನಿ ಎಂದು ಮನವಿ ಮಾಡಿದರೆ, ಬಂದವರನ್ನು ಮತದಾನ ಆದ ಮೇಲೆ ಹೋಗಿ ಎಂದು ಅಧಿಕಾರಿಗಳು ವಿನಂತಿ ಮಾಡುತ್ತಿದ್ದಾರೆ.

Advertisement

ವಲಸೆ ಸಮಸ್ಯೆ: ಎಲ್ಲಿ ಹೆಚ್ಚು?: ವಲಸೆ ಸಮಸ್ಯೆ ಉತ್ತರ ಕರ್ನಾಟಕ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿದೆ. ಈ ಜಿಲ್ಲೆಯ ಬಡ-ಮಧ್ಯಮ ಕಾರ್ಮಿಕ ವರ್ಗ ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತದೆ. ಜತೆಗೆ ಬೆಂಗಳೂರಿಗೂ ವಲಸೆ ಬರುವವರ ಸಂಖ್ಯೆ ದೊಡ್ಡಮಟ್ಟದಲ್ಲಿರುತ್ತದೆ. ವಲಸೆ ಸಮಸ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ವಿಶೇಷ ಒತ್ತುಕೊಟ್ಟು ಜಾಗೃತಿ ಮತ್ತು ಮನವೊಲಿಕೆ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿ ಆಧರಿಸಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ.

ವಲಸೆ ಹೋದವರ ಕುಟುಂಬದ ಸದಸ್ಯರನ್ನು ಚುನಾವಣ ಆಯೋಗದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮನೆಗೆ ಭೇಟಿ ಕೊಟ್ಟು ತಮ್ಮ ಕುಂಟುಬದ ವಲಸಿಗ ಸದಸ್ಯರನ್ನು ಮತದಾನದ ದಿನ ವಾಪಸ್‌ ಬಂದು ಮತ ಚಲಾಯಿಸುವಂತೆ ಹೇಳಲು ಮನವಿ ಮಾಡಲಾಗುತ್ತದೆ.
-ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ.

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next