ವಿಜಯಪುರ: ವಿಜಯಪುರ ನಗರ ವಿಧಾನಸಭೆ ಕ್ಷೇತ್ರಕ್ಕೆ ಶಾಸಕ ಯತ್ನಾಳಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶಟ್ಟಿ ಸಿಟ್ಟು ಹೊರಹಾಕಿದ್ದಾರೆ.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ತಮಗೆ ಟಿಕೆಟ್ ತಪ್ಪಿದ್ದಕ್ಕೆ ಸಿಟ್ಟು ಹೊರಹಾಕೊರುವ ಪಟ್ಟಣಶಟ್ಟಿ, ವಿಜಯಪುರ ನಗರ ಕ್ಷೇತ್ರದಿಂದ ಟಿಕೆಟ್ ಮರು ಹಂಚಿಕೆ ಮಾಡಿ ವರಿಷ್ಠರು ನನಗೆ ನೀಡಬೇಕು. ಜಿಲ್ಲೆಯ ಇನ್ನೂ ಮೂರು ಸಾಮಾನ್ಯ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿಲ್ಲ. ಆ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕಡೆ ಯತ್ನಾಳ್ ಅವರಿಗೆ ಟಿಕೆಟ್ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ನಾನು, ಕಳೆದ ಬಾರಿ ಟಿಕೆಟ್ ತಪ್ಪಿದರೂ ಪಕ್ಷದ ವಿರುದ್ಧ ಧ್ವನಿ ಎತ್ತದೇ ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿದ್ದೆ. ಈ ಬಾರಿಯೂ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ವರಿಷ್ಠರು ನನ್ನನ್ನು ಕಡೆಗಣಿಸಿ ಯತ್ನಾಳ್ ಅವರಿಗೆ ಮಣೆ ಹಾಕಿರುವುದು ಸರಿಯಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.
ಪಕ್ಷದ ವರಿಷ್ಠರನ್ನು ನಿಂದಿಸುವ, ಸ್ಥಳೀಯವಾಗಿ ನಾಯಕರು, ಕಾರ್ಯಕರ್ತರೊಂದಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಯತ್ನಾಳ, ಪಕ್ಷ ವಿರೋಧಿ ವರ್ತನೆಯಿಂದಲೇ ಎರಡು ಬಾರಿ ಉಚ್ಛಾಟನೆ ಆಗಿದ್ದವರು. ಪಕ್ಷದ ವರಿಷ್ಠರ ನಿರ್ಧಾರವನ್ನು ವಿರೋಧಿಸಿ ಮೇಲ್ಮನೆ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆ ಮಾಡಿದರೂ ಯತ್ನಾಳ ಅವರಿಗೆ ಟಿಕೆಟ್ ನೀಡಲಾಗಿದೆ. ಪದೇ ಪದೇ ಅವಕಾಶ ವಂಚಿತನಾದರೂ ನಾನು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದು, ಪಕ್ಷನಿಷ್ಟೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೂ ನನ್ನನ್ನು ಕಡೆಗಣಿಸಲಾಗಿದೆ. ಕೂಡಲೇ ವರಿಷ್ಠರು ನನಗೆ ಆಗಿರುವ ಅನ್ಯಾಯ ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಯತ್ನಾಳ ಈ ಹಿಂದೆ ಸ್ಪರ್ಧಿಸಿದ್ದ ದೇವರಹಿಪ್ಪರಗಿ ಸೇರಿದಂತೆ ಇಂಡಿ, ಬಸವನಬಾಗೇವಾಡಿ ಕ್ಷೇತ್ರಕ್ಕೂ ಟಿಕೆಟ್ ಘೋಷಿಸಿಲ್ಲ. ಈ ಮೂರರಲ್ಲಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಯತ್ನಾಳ್ ಅವರಿಗೆ ಟಿಕೆಟ್ ನೀಡಬೇಕು. ನನಗೆ ನನ್ನ ಮೂಲ ಕ್ಷೇತ್ರ ವಿಜಯಪುರ ನಗರದಿಂದಲೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.