ವಿಜಯಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ವಿಜಯಪುರ ನಗರಕ್ಕೆ ಆಗಮನದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಶಿವಾಜಿ ವೃತ್ತದಿಂದ ಕನಕದಾಸ ವೃತ್ತದ ವರೆಗೆ ಬಹುತೇಕ ಮುಖ್ಯ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಬಾಗಲಕೋಟೆಯ ಕೂಡಲಸಂಗಮದಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 4ಕ್ಕೆ ವಿಜಯಪುರ ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಈ ಭಾರಿ ಭದ್ರತೆ ಕಲ್ಪಿಸಿದ್ದಾರೆ.
ಕೂಡಲಸಂಗಮ ಕ್ಷೇತ್ರದಿಂದ ನಗರದ ಸೈನಿಕ ಶಾಲಾ ಆವರಣದ ಹೆಲಿಪ್ಯಾಡಿಗೆ ಬಂದಿಳಿಯುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಳಿಕ ವಿಜಯಪುರ ನಗರದಲ್ಲಿ ಚುನಾವಣಾ ಪ್ರಚಾರಾರ್ಥ ಛತ್ರಪತಿ ಶಿವಾಜಿ ವೃತ್ತದಿಂದ ರೋಡ್ ಶೋ ಆರಂಭಿಸಲಿದ್ದಾರೆ.
ಹೀಗಾಗಿ ರಾಹುಲ್ ರೋಡ್ ಶೋ ನಡೆಯಲಿರುವ ಎರಡೂ ಬದಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಈ ಮಾರ್ಗ ಸಂಪರ್ಕಸಿರುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದ್ದಾರೆ. ಶಿವಾಜಿ ವೃತ್ತದಿಂದ ಕನಕದಾಸ ವೃತ್ತದವರೆಗೂ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಬೆಳಿಗ್ಗೆಯಿಂದಲೇ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಶಿವಾಜಿ ವೃತ್ತದಿಂದ ಆರಂಭಗೊಳ್ಳುವ ರಾಹುಲ್ ರೋಡ್ ಶೋ, ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಹಾಯ್ದು ಕನಕದಾಸ ವೃತ್ತದ ವರೆಗೆ ಸಾಗಿ, ಮುಕ್ತಾಯವಾಗಲಿದೆ. ಬಳಿಕ ಅಲ್ಲಿಯೇ ನೆರೆದ ಜನರನ್ನು ಉದ್ಧೇಶಿಸಿ ರಾಹುಲ್ ಗಾಂಧೀ ಮಾತನಾಡಿ, ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದಾರೆ.
ಎಸ್ಪಿ ಆನಂದಕುಮಾರ್ ನೇತೃತ್ವದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಓರ್ವ ಎಎಸ್ಪಿ, ಡಿಎಸ್ಪಿ 5, ಸಿಪಿಐ 14, ಪಿಎಸೈ 18, ಎಎಸ್‍ಐ 60, 360 ಪೊಲೀಸರು, ಭಾರತೀಯ ರಿಸರ್ವ್ ಪೊಲೀಸ್‍ನ 4 ತಂಡ, ಜಿಲ್ಲಾ ಶಸ್ತ್ರ ಮೀಸಲು ಪಡೆಯ 6 ತಂಡ ಹಾಗೂ 90 ಜನರ ಸಿಆರ್‍ಪಿಎಫ್‍ನ ಒಂದು ತಂಡವನ್ನು ರಾಹುಲ್ ಗಾಂಧೀ ಭದ್ರತೆಗೆ ನಿಯೋಜಿಸಲಾಗಿದೆ.